ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಮೀಸಲಿಡಲಾಗಿದ್ದ ಜಮೀನನ್ನು ಬೆಂಗಳೂರು ಮೂಲದ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಫ್ಲಾಟ್‌ಗಳನ್ನು ನಿರ್ಮಿಸಲು ಸಜ್ಜಾಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.ಮಂಡ್ಯ ತಾಲೂಕು ಚಂದಗಾಲು ಗ್ರಾಪಂ ವ್ಯಾಪ್ತಿಯ ಬಿಳಿಗುಲಿ ಗ್ರಾಮದ ಸರ್ವೆ ನಂ. ೯೪/೧ಪಿ೧ರಲ್ಲಿನ ೪ ಎಕರೆ ಜಮೀನನ್ನು ಆಶ್ರಯ ಯೋಜನೆಗೆ ಮಂಜೂರು ಮಾಡಿ ಮೀಸಲಿರಿಸಲಾಗಿತ್ತು. ಈ ಜಮೀನನ್ನು ಬೆಂಗಳೂರು ಮೂಲದ ಮಹಮ್ಮದ್ ಫಾರೂಕ್ ಮತ್ತು ಮಹಮ್ಮದ್ ಸಲೀಂ ಎಂಬುವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಫ್ಲಾಟ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಬಿಳಿಗುಲಿ ಗ್ರಾಮದ ಸರ್ವೆ ನಂ.೯೪ರಲ್ಲಿ ೮೯.೦೧ ಎಕರೆ ಪ್ರದೇಶವಿದ್ದು, ಇದರಲ್ಲಿ ೬.೦೫ ಎಕರೆ ಜಮೀನಿನಲ್ಲಿ ಸರ್ಕಾರ ಗೋಮಾಳವಿದ್ದು, ಅದರಲ್ಲಿ ೪ ಎಕರೆ ಜಮೀನನ್ನು ೨೦೧೯ರಲ್ಲಿ ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನ ಹಂಚುವ ಸಲುವಾಗಿ ಮೀಸಲಿಡಲಾಗಿತ್ತು ಎನ್ನುವುದು ದಾಖಲೆಗಳಿಂದ ತಿಳಿದುಬಂದಿದೆ.ಮಯೂರವನ ರೆಸಾರ್ಟ್ ಮಾಲೀಕ ಮಹಮ್ಮದ್ ಫಾರೂಕ್ ಮತ್ತು ಮಹಮ್ಮದ್ ಸಲೀಂ ಹೆಸರಿನಲ್ಲಿ ಈ ೪ ಎಕರೆ ಜಾಗ ಅಕ್ರಮ ಖಾತೆಯಾಗಿರುವುದಾಗಿ ಹೇಳಲಾಗಿದ್ದು, ಬಡವರಿಗೆ ಸೇರಬೇಕಾದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸುತ್ತಿದ್ದರು ಎನ್ನುವುದು ಗೊತ್ತಾಗಿದೆ.
ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿ ನೆರವಿನಿಂದ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ನ್ನು ತೆರವುಗೊಳಿಸಲಾಗಿದೆ. ಆಶ್ರಯ ನಿವೇಶನಕ್ಕೆ ಮೀಸಲಿಡಲಾಗಿದ್ದ ೪ ಎಕರೆ ಜಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಆ ಜಾಗದಲ್ಲಿ ಸರ್ವೆ ನಂ.೯೪/೧ಪಿ೧ರಲ್ಲಿರುವ ಆಶ್ರಯ ಯೋಜನೆಗೆ ಮಂಜೂರಾದ ಸ್ವತ್ತು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಅಳವಡಿಸಿದ್ದಾರೆ.ಮಯೂರ ವನ ಹೆಸರಿನಲ್ಲಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದ್ದು, ಅದನ್ನು ಮಾರ್ಕೆಟಿಂಗ್ ಮಾಡುವುದಕ್ಕೆ ಕರಪತ್ರಗಳನ್ನು ಮುದ್ರಿಸಿ ಜಾಹೀರಾತು ರೂಪದಲ್ಲಿ ಹಂಚಿದ್ದರು. ಭ್ರಷ್ಟ ಅಧಿಕಾರಿಗಳು ಶಾಮೀಲು
ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡುವುದಕ್ಕೆ ಮೀಸಲಿರಿಸಿದ್ದ ೪ ಎಕರೆ ಜಮೀನು ಖಾಸಗಿ ವ್ಯಕ್ತಿಗಳಿಗೆ ಪರಭಾರೆಯಾಗಿರುವುದರ ಹಿಂದೆ ಭ್ರಷ್ಟ ಅಧಿಕಾರಿಗಳ ಕೈವಾಡವಿರುವುದಾಗಿ ಹಲವರು ಆರೋಪಿಸಿದ್ದಾರೆ.ಹಣದ ಆಮಿಷಕ್ಕೆ ಬಲಿಯಾಗಿ ಅಧಿಕಾರಿಗಳು ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಅಕ್ರಮವಾಗಿ ಪರಭಾರೆ ಮಾಡಿದ್ದಾರೆ. ಮೇಲ್ನೋಟಕ್ಕೆ ೪ ಎಕರೆ ಎನ್ನುವುದು ಖಚಿತಪಟ್ಟಿದೆಯಾದರೂ, ಒಟ್ಟಾರೆ ಎಷ್ಟು ಎಕರೆ ಭೂಮಿ ಒತ್ತುವರಿಯಾಗಿದೆ ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಎಲ್ಲವೂ ಮುಗಿದ ಬಳಿಕ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎನ್ನಲಾಗಿದೆ.೨೬ ಎಕರೆ ಸರ್ಕಾರಿ ಜಮೀನು ಒತ್ತುವರಿ: ದರ್ಶನ್ ಪುಟ್ಟಣ್ಣಯ್ಯ
ಮನೆ ಮನೆಗೆ ಸರ್ಕಾರಿ ಕಾರ್ಯಕ್ರಮವನ್ನು ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿತ್ತು. ಅದರ ಭಾಗವಾಗಿ ಸರ್ಕಾರಿ ಜಮೀನುಗಳನ್ನು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸುವುದು ಸೇರಿತ್ತು. ಸರ್ವೆ ನಂ.೯೪ರಲ್ಲಿ ೧೦೭ ಎಕರೆ ಸರ್ಕಾರಿ ಜಮೀನಿದ್ದು ಅದರಲ್ಲಿ ೮೧ ಎಕರೆಯನ್ನು ಜನರಿಗೆ ಹಂಚಿಕೆ ಮಾಡಲಾಗಿತ್ತು. ಉಳಿದ ೨೬ ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಮಯೂರ ವನ ಹೆಸರಿನ ಕಂಪನಿಯವರು ಫ್ಲಾಟ್ಸ್‌ಗಳನ್ನು ಮಾಡುತ್ತಿದ್ದರು ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆರೋಪಿಸಿದರು. ಆಶ್ರಯ ಯೋಜನೆಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದರು. ಅದನ್ನು ಗುರುತಿಸಿ ತಹಸೀಲ್ದಾರ್, ಭೂಸ್ವಾಧೀನ ಅಧಿಕಾರಿ, ಚಂದಗಾಲು ಗ್ರಾಪಂ ಪಿಡಿಒ, ಪಂಚಾಯ್ತಿ ಅಧ್ಯಕ್ಷರು-ಉಪಾಧ್ಯಕ್ಷರೆಲ್ಲರೂ ಸಹಕಾರ ನೀಡಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲೆಲ್ಲಿ ಸರ್ಕಾರಿ ಜಮೀನುಗಳು ಒತ್ತುವರಿಯಾಗಿವೆಯೋ ಅದನ್ನೆಲ್ಲವನ್ನೂ ತೆರವುಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಒತ್ತುವರಿ ತೆರವುಗೊಳಿಸಲು ಶುರು ಮಾಡಿದ ದಿನವೇ ಹಲವಾರು ಜನರು ಈ ಜಾಗ ನಮಗೆ ಸೇರಬೇಕು ಎಂದು ದಾಖಲಾತಿಗಳೊಂದಿಗೆ ಬರುತ್ತಿದ್ದಾರೆ. ಇದೇ ಜಾಗವನ್ನು ಇಬ್ಬರು-ಮೂರು ಜನರಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಒತ್ತುವರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತೆಗೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಯಾರು ಯಾರು ಭಾಗಿಯಾಗಿದ್ದಾರೋ ಎಲ್ಲರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದರು.