ಸಾರಾಂಶ
ಹೊಸಪೇಟೆ: ನಗರದ ಬಳ್ಳಾರಿ ರಸ್ತೆಯ ಶ್ರೀರಾಮಕೃಷ್ಣ ಗೀತಾಶ್ರಮಕ್ಕೆ ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಶ್ರೀರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಕರ್ನಾಟಕದ ಅರ್ಧವಾರ್ಷಿಕ ಸಭೆಯನ್ನು ಜು.2, 3ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿವೇಕಾನಂದ ಭಾವಪ್ರಚಾರ ಪರಿಷತ್ ಸಂಚಾಲಕರು ಹಾಗೂ ರಾಣಿಬೆನ್ನೂರು ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜೀ ಮಹಾರಾಜ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ರಸ್ತೆಯ ವಾಸವಿ ಕಲ್ಯಾಣ ಮಂಟಪದಲ್ಲಿ ದಶಮಾನೋತ್ಸವ ಪ್ರಯುಕ್ತ ದಿವ್ಯತ್ರಯರ ಸ್ಮರಣೋತ್ಸವ, ಯುವ ಸಮ್ಮೇಳನ, ಶ್ರೀರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ ಕರ್ನಾಟಕ ಪ್ರಾಂತ್ಯದ ಅರ್ಧವಾರ್ಷಿಕ ಸಭೆ ಹಮ್ಮಿಕೊಳ್ಳಲಾಗಿದೆ. ನಾಡಿನ ಹಾಗೂ ದೇಶದ ವಿವಿಧ ಭಾಗಗಳಿಂದ ಯತಿಗಳು ಆಗಮಿಸಲಿದ್ದಾರೆ.
ಜು.2ರಂದು ಸಂಜೆ 6 ಗಂಟೆಗೆ ಕೊಲ್ಕತ್ತಾ ರಾಮಕೃಷ್ಣ ಮಿಷನ್ ಆಶ್ರಮದ ವಿನಿಶ್ಚಲಾನಂದಜೀ ಮಹಾರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರು ರಾಮಕೃಷ್ಣ ಮಠದ ಶ್ರೀಮುಕ್ತಿದಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಲಸೂರು ಮಠದ ಬೋಧಸ್ವರೂಪಾನಂದಜೀ ಮಹಾರಾಜ್, ದಾವಣಗೆರೆ ಮಠದ ತ್ಯಾಗೀಶ್ವರಾನಂದಜೀ ಮಹಾರಾಜ್, ಭವತಾರಿಣಿ ಆಶ್ರಮದ ಮಾತಾಜೀ ವಿವೇಕಮಯಿಯವರು ಸಾನ್ನಿಧ್ಯ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಐಜಿಪಿ ರವಿ ಡಿ.ಚೆನ್ನಣ್ಣನವರ್, ಗೋಕಾಕ್ ತಹಸೀಲ್ದಾರ ಮೋಹನ್ ಭಸ್ಮೆ, ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜನ ಜಾಲಿ, ವಿ.ಎಸ್. ಕುಬೇರಪ್ಪ, ಉದ್ಯಮಿ ಎಚ್.ಶ್ರೀನಿವಾಸರಾವ್ ಪಾಳ್ಗೊಳ್ಳಲಿದ್ದಾರೆ ಎಂದರು.
ಯುವ ಸಮ್ಮೇಳನ: ಜುಲೈ 3 ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿರುವ ಯುವ ಸಮ್ಮೇಳನ ಪೂಜ್ಯ ಶ್ರೀಮುಕ್ತಿದಾನಂದಜೀ ಮಹಾರಾಜ್ ಸಾನಿಧ್ಯದಲ್ಲಿ ನಡೆಯಲಿದೆ. ನಿರ್ಭಯಾನಂದಜೀ ಮಹಾರಾಜ್, ರವಿ ಡಿ.ಚೆನ್ನಣ್ಣನವರ್, ಸ್ವಾಮಿ ಬೋಧಮಯಾನಂದಜೀ ಮಹಾರಾಜ್ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ. ನಾಗರಾಜ್ ಹವಾಲ್ದಾರ್, ಯುವ ಮುಖಂಡ ಸಿದ್ಧಾರ್ಥ ಸಿಂಗ್ ಪಾಲ್ಗೊಳಲ್ಲಿದ್ದಾರೆ.ಸಂಜೆ 6 ಗಂಟೆಗೆ ನಿರ್ಭಯಾನಂದಜೀ ಮಹಾರಾಜ್, ಸೇವಾನಂದಜೀ ಮಹಾರಾಜ್ ಸಾನಿಧ್ಯದಲ್ಲಿ ಉಪನ್ಯಾಸದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಚಳ್ಳಕೆರೆ ಶಾರದಾಶ್ರಮದ ಮಾತಾ ತ್ಯಾಗಮಯಿ ಪಾಳ್ಗೊಳ್ಳಲಿದ್ದಾರೆ.
ಶಾಸಕ ಎಚ್.ಆರ್. ಗವಿಯಪ್ಪ, ಕನ್ನಡ-ಸಂಸ್ಕೃತಿ ಇಲಾಖೆಯ ಸಿದ್ಧಲಿಂಗೇಶ ರಂಗಣ್ಣನವರ್, ಕಿರ್ಲೋಸ್ಕರ್ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ, ಉದ್ಯಮಿ ಕಮಲಾಕ್ಷ ಶ್ಯಾನಭಾಗ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.ಗಾಯಕಿ ಸಂಗೀತಾ ಕಟ್ಟಿ, ತಬಲಾವಾದಕ ರಾಜೇಂದ್ರ ನಾಕೋಡ್, ಭಜನ ಸಂಧ್ಯಾ ನಡೆಸಲಿದ್ದಾರೆ. ಶ್ರೀರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಕರ್ನಾಟಕ ಅರ್ಧವಾರ್ಷಿಕ ಸಭೆ, ಆಧ್ಯಾತ್ಮಿಕ ಚಿಂತನಗೋಷ್ಠಿ ಸೇರಿದಂತೆ ಅರ್ಥಪೂರ್ಣ ಕಾರ್ಯಕ್ರಮಗಳ ಸಂಗಮ ಹೊಸಪೇಟೆಯ ಗೀತಾಶ್ರಮದ ದಶಮಾನೋತ್ಸವ ಸಂಭ್ರಮದ ಜೊತೆ ನಡೆಯಲಿವೆ.
ಗೋಷ್ಠಿಯಲ್ಲಿ ಸುಮೇದಾನಂದಜೀ ಮಹಾರಾಜ್, ಜೈತ್ಯನಾನಂದಜೀ ಮಹಾರಾಜ್, ಆತ್ಮದೀಪಾನಂದಜೀ ಮಹಾರಾಜ್, ಭೂಪಾಳ ಪ್ರಹ್ಲಾದ್, ರಾಘವೇಂದ್ರ ಜಮಖಂಡಿ ಇದ್ದರು.ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಭಾವಪ್ರಚಾರ ಪರಿಷತ್ ಸಂಚಾಲಕ ಪ್ರಕಾಶಾನಂದಜೀ ಮಹಾರಾಜ್ ಮಾತನಾಡಿದರು. ಆತ್ಮದೀಪಾನಂದಜೀ ಮಹಾರಾಜ್, ಸುಮೇದಾನಂದಜೀ ಮಹಾರಾಜ್, ಜೈತ್ಯನಾನಂದಜೀ ಮಹಾರಾಜ್, ಭೂಪಾಳ ಪ್ರಹ್ಲಾದ್, ರಾಘವೇಂದ್ರ ಜಮಖಂಡಿ ಇದ್ದರು.