ಗೆಜ್ಜಲಗೆರೆ ಗ್ರಾಮ ಸುತ್ತಮುತ್ತ ಹಸಿರು ವಲಯ ಇಲ್ಲ ಎಂದು ಪೌರಾಡಳಿತ ಸಚಿವರು ಖುದ್ದು ಪರಿಶೀಲನೆ ಮಾಡಿದ್ದಾರಾ ಅಥವಾ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಯಾವುದೇ ಅಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದಾರಾ. ಗೆಜ್ಜಲಗೆರೆ ಗ್ರಾಮವನ್ನು ಯಾವುದೋ ಆಮಿಷಕ್ಕೆ ಒಳಗಾಗಿ ನಾಶ ಮಾಡಿ ಗ್ರಾಮಸ್ಥರಿಗೆ ದ್ರೋಹ ಮಾಡಲು ಹೊರಟಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರಿ ನಾಲ್ಕು ಗ್ರಾಮ ಪಂಚಾಯ್ತಿಗಳ ಸೇರ್ಪಡೆ ಬಗ್ಗೆ ಸದನದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ಮದ್ದೂರು ನಗರಸಭೆಯನ್ನು ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ನೀಡಿರುವ ಹೇಳಿಕೆ ವಿರೋಧಿಸಿ, ಗೆಜ್ಜಲಗೆರೆ ಗ್ರಾಮ ಹೋರಾಟ ಸಮಿತಿ ಕಾರ್ಯಕರ್ತರು ಸಚಿವರ ಹೇಳಿಕೆ ಪ್ರತಿ ಹರಿದು ಪ್ರತಿಭಟನೆ ನಡೆಸಿದರು.ರೈತರು ಮತ್ತು ಗ್ರಾಮಸ್ಥರು, ಜನಾಭಿಪ್ರಾಯಕ್ಕಿಂತ ಸರ್ಕಾರದ ತೀರ್ಮಾನವೇ ದೊಡ್ಡದೇ ಎಂದು ಪ್ರಶ್ನಿಸಿ, ಸಚಿವರ ಹೇಳಿಕೆ ಪ್ರತಿ ಹರಿದು ಕಸದ ಬುಟ್ಟಿಗೆ ಎಸೆದು ಪ್ರತಿಭಟಿಸಿದರು. ಸಚಿವ ರಹೀಮ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕದ್ವಯರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ರೈತಪರ ಹೋರಾಟಗಾರ್ತಿ ಸುನಂದ ಜಯರಾಂ ಮಾತನಾಡಿ, ಗ್ರಾಪಂ ವ್ಯಾಪ್ತಿಗಳಲ್ಲಿ ಇರುವ ಜನರು ಬೇಸಾಯ ಬಿಟ್ಟು ಕೃಷಿಯೇತರ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇಂದು ಕಾರಣ ಕೊಟ್ಟು ಗ್ರಾಮ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿದರು.ಗೆಜ್ಜಲಗೆರೆ ಗ್ರಾಮ ಸುತ್ತಮುತ್ತ ಹಸಿರು ವಲಯ ಇಲ್ಲ ಎಂದು ಪೌರಾಡಳಿತ ಸಚಿವರು ಖುದ್ದು ಪರಿಶೀಲನೆ ಮಾಡಿದ್ದಾರಾ ಅಥವಾ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಯಾವುದೇ ಅಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದಾರಾ. ಗೆಜ್ಜಲಗೆರೆ ಗ್ರಾಮವನ್ನು ಯಾವುದೋ ಆಮಿಷಕ್ಕೆ ಒಳಗಾಗಿ ನಾಶ ಮಾಡಿ ಗ್ರಾಮಸ್ಥರಿಗೆ ದ್ರೋಹ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಟಿ.ಚಂದ್ರಶೇಖರ್, ಜಿ.ಡಿ.ಚಂದ್ರು, ನಿಂಗಪ್ಪಣ್ಣ, ಮೋಹನ್ ಕುಮಾರ್, ನಾಗಣ್ಣ, ರೈತ ಸಂಘದ ವೀರಪ್ಪ, ಶಾಂತಮ್ಮ, ಪ್ರಭಾವತಿ, ಗೌರಮ್ಮ, ರಾಜಮ್ಮ, ಸತ್ಯವತಿ, ರಾಘವ, ಪದ್ಮಮ್ಮ, ಹೊಂಬಾಳಮ್ಮ ಮತ್ತಿತರರು ಭಾಗವಹಿಸಿದ್ದರು.