ಸಾರಾಂಶ
ಸರ್ಕಾರಿ ಇಲಾಖೆಗಳಲ್ಲಿ ಸರಕು ಮತ್ತು ಸೇವೆಗಳ ಖರೀದಿಗೆ ಜೆಮ್ ಪೋರ್ಟಲ್ ಪೂರಕವಾಗಿದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಸರ್ಕಾರಿ ಇಲಾಖೆಗಳಲ್ಲಿ ಸರಕು ಮತ್ತು ಸೇವೆಗಳ ಖರೀದಿಗೆ ಜೆಮ್ ಪೋರ್ಟಲ್ ಪೂರಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ಜಿಇಎಂ (ಜೆಮ್) ಹಾಗೂ ಇನ್‌ಕಂ ಟ್ಯಾಕ್ಸ್ ವಿಷಯಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜೆಮ್) ವಿವಿಧ ಸರ್ಕಾರಿ ಇಲಾಖೆಗಳು, ಸಂಸ್ಥೆಗಳ ಅಗತ್ಯದ ಸರಕು ಮತ್ತು ಸೇವೆಗಳ ಸಾಮಾನ್ಯ ಬಳಕೆಯ ಆನ್‌ಲೈನ್ ಖರೀದಿಗೆ. ಟೆಂಡರ್ ಪ್ರಕ್ರಿಯೆಗಳ ಸುಲಭಕ್ಕೆ ಸೌಲಭ್ಯ ಒದಗಿಸುತ್ತದೆ. ಈ ವ್ಯವಸ್ಥೆಯು ಕಳೆದ 8 ವರ್ಷಗಳ ಹಿಂದೆಯೇ ಜಾರಿಯಾಗಿದ್ದು, ಇದರ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಸಿಬ್ಬಂದಿಗೆ ಜೆಮ್, ಇನ್‌ಕಂ ಟ್ಯಾಕ್ಸ್ ಮತ್ತು ಟಿಡಿಎಸ್ ವಿಷಯಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ತರಬೇತಿ ಸಂಸ್ಥೆಯಿಂದ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯ ಸದುಪಯೋಗ ಪಡೆದುಕೊಂಡು ಜೆಮ್ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಬೆಂಗಳೂರು ಜೆಮ್ ವಿಭಾಗದ ಸಹಾಯಕ ನಿರ್ದೇಶಕ ದೀಪಕ, ಜಿಲ್ಲಾ ಎನ್.ಐ.ಸಿ.ಯ ಬಸವರಾಜ ಸೇರಿದಂತೆ ಮತ್ತಿತರರಿದ್ದರು.
ಜೆಮ್, ಇನ್‌ಕಂ ಟ್ಯಾಕ್ಸ್ ಕುರಿತು ತರಬೇತಿ:ಉದ್ಘಾಟನಾ ಕಾರ್ಯಕ್ರಮದ ಬಳಿಕ ಜೆಮ್ ಸಹಾಯಕ ನಿರ್ದೇಶಕ ದೀಪಕ ಜಿಇಎಂ (ಜೆಮ್) ಕುರಿತು ಹಾಗೂ ಬಳ್ಳಾರಿಯ ಆದಾಯ ತೆರಿಗೆ ಅಧಿಕಾರಿ ಶಶಿಭೂಷಣ ಹಾಗೂ ಇನ್ಸ್ಪೆಕ್ಟರ್ ದತ್ತಾತ್ರೇಯ ಇನ್‌ಕಂ ಟ್ಯಾಕ್ಸ್ & ಟಿಡಿಎಸ್ ವಿಷಯಗಳ ಬಗ್ಗೆ ತರಬೇತಿ ನೀಡಿದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.