ಸಮಾಜದಲ್ಲಿ ಲಿಂಗ ತಾರತಮ್ಯ ಇನ್ನೂ ಜೀವಂತ; ಇದಕ್ಕೆ ಹೆಣ್ಣುಭ್ರೂಣ ಹತ್ಯೆಯೆ ಸಾಕ್ಷಿ: ಡಾ.ವಸುಂಧರಾ

| Published : Mar 20 2025, 01:21 AM IST

ಸಮಾಜದಲ್ಲಿ ಲಿಂಗ ತಾರತಮ್ಯ ಇನ್ನೂ ಜೀವಂತ; ಇದಕ್ಕೆ ಹೆಣ್ಣುಭ್ರೂಣ ಹತ್ಯೆಯೆ ಸಾಕ್ಷಿ: ಡಾ.ವಸುಂಧರಾ
Share this Article
  • FB
  • TW
  • Linkdin
  • Email

ಸಾರಾಂಶ

ಗಂಡು, ಹೆಣ್ಣಿನ ನಡುವೆ ಯಾವುದೇ ರೀತಿಯ ಬೇಧವಿಲ್ಲ. ಆದರೂ ಸಮಾಜದಲ್ಲಿ ಗಂಡು, ಹೆಣ್ಣಿನ ನಡುವೆ ಬೇಧ ಕಲ್ಪಿಸಲಾಗುತ್ತಿದೆ. ಪುರುಷ, ಸ್ತ್ರೀ ಎಂಬ ಸಮಾನತೆ ವಿಚಾರ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ. ಪುರುಷ, ಮಹಿಳೆಯರು ತಾನೇ ಹೆಚ್ಚು ಎಂಬುದನ್ನು ಬಿಡಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮಾಜದಲ್ಲಿ ಲಿಂಗ ತಾರತಮ್ಯ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಹೆಣ್ಣು ಭ್ರೂಣ ಹತ್ಯೆ ಸಾಕ್ಷಿಯಾಗಿದೆ ಎಂದು ಬೆಂಗಳೂರಿನ ಲಿಡ್‌ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ವಸುಂಧರಾ ಆತಂಕ ವ್ಯಕ್ತಪಡಿಸಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಪದ್ಮ ಜಿ.ಮಾದೇಗೌಡ ಪ್ರತಿಷ್ಠಾನದಿಂದ ಆಯೋಜಿಸಿದ್ದ 11ನೇ ವರ್ಷದ ಶ್ರೀಮತಿ ಪದ್ಮ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.ಹೆಣ್ಣು ಭ್ರೂಣ ಹತ್ಯೆಯಲ್ಲಿ ಪುರುಷರ ಪಾತ್ರ ಎಷ್ಟಿದೆಯೋ ಮಹಿಳೆಯರ ಪಾತ್ರವೂ ಕೂಡ ಅಷ್ಟೆ ಇದೆ ಎಂಬುದನ್ನು ಹೇಳಿಕೊಳ್ಳಲು ಹೆಣ್ಣಾದ ನಮಗೆ ನಾಚಿಕೆಯಾಗುತ್ತಿದೆ. ಮಂಡ್ಯ ಜಿಲ್ಲೆಯು ಹೆಣ್ಣು ಭ್ರೂಣ ಹತ್ಯೆಯಂತಹ ಪಾಪದ ಕೆಲಸದಲ್ಲಿ ನಂ 1 ಸ್ಥಾನ ಗಳಿಸಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.

ಗಂಡು, ಹೆಣ್ಣಿನ ನಡುವೆ ಯಾವುದೇ ರೀತಿಯ ಬೇಧವಿಲ್ಲ. ಆದರೂ ಸಮಾಜದಲ್ಲಿ ಗಂಡು, ಹೆಣ್ಣಿನ ನಡುವೆ ಬೇಧ ಕಲ್ಪಿಸಲಾಗುತ್ತಿದೆ. ಪುರುಷ, ಸ್ತ್ರೀ ಎಂಬ ಸಮಾನತೆ ವಿಚಾರ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ. ಪುರುಷ, ಮಹಿಳೆಯರು ತಾನೇ ಹೆಚ್ಚು ಎಂಬುದನ್ನು ಬಿಡಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದರು.

ಗಂಡು-ಹೆಣ್ಣು ಎಂಬ ತಾರತಮ್ಯ ನಿಲ್ಲಿಸಿದಾಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯ. ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ. ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯ ದಾಪುಗಾಲು ಇಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಜಲ ಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಯರಾಂ ರಾಯಪುರ ಮಾತನಾಡಿ, ಪದ್ಮ ಜಿ.ಮಾದೇಗೌಡ ಅವರು ಮಾಜಿ ಸಂಸದ ಜಿ.ಮಾದೇಗೌಡರ ಬೆನ್ನೆಲಬಾಗಿ ನಿಂತು ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸ್ವಾವಲಂಭಿಗಳಾಗಿ ಮಾಡಲು ತೆರೆಮರೆಯಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಪದ್ಮಮ್ಮ ಅವರ ಶ್ರಮ ಸಾರ್ಥಕತೆ ಪಡೆಯಬೇಕಾದರೆ ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸ್ವಾವಲಂಭಿಗಳಾಗಬೇಕು ಎಂದರು.

ಮಾಜಿ ಸಂಸದ ದಿ.ಜಿ.ಮಾದೇಗೌಡರು ಸರ್ಕಾರ ಮಾಡಬೇಕಾದ ಕೆಲಸಗಳನ್ನು ಮಾಡಿದ್ದು, ವಿದ್ಯಾ ಸಂಸ್ಥೆಯನ್ನು ವಿಶ್ವ ವಿಶ್ವ ವಿದ್ಯಾನಿಲಯದ ರೀತಿ ಕಂಗೋಳಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತ ಗೌಡರು ಹಾಕಿ ಕೊಟ್ಟ ಮಾರ್ಗದಲ್ಲಿ ಪುತ್ರ ಮಧು ಜಿ.ಮಾದೇಗೌಡ, ಮೊಮ್ಮಗ ಆಶಯ್ ಮಧು ಹೊಸ ಆಲೋಚನೆಗಳೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಶ್ರೀಮತಿ ಪದ್ಮ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರಿಗೆ ನೀಡಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶಿಕ್ಷಕರು, ಉಪನ್ಯಾಸಕಿಯರು ಮತ್ತು ಸಿಬ್ಬಂದಿಗೆ ನಡೆಸಲಾದ ಹಲವು ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಭಾರತೀ ವಿದ್ಯಾಸಂಸ್ಥೆ ಚೇರ್‍ಮನ್, ಎಂಎಲ್ಸಿ ಮಧು ಜಿ.ಮಾದೇಗೌಡ, ಬೆಂಗಳೂರಿನ ಬ್ಯಾಟರಾಯಪುರ ಶ್ರೀಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ಹೊಂಬಾಳೆ, ದಿ.ಜಿ.ಮಾದೇಗೌಡ ಪತ್ನಿ ಪದ್ಮ , ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ನಂಜೇಗೌಡ, ಬಿಇಟಿ ಟ್ರಸ್ಟ್‌ನ ಕಾರ್ಯಧ್ಯಕ್ಷ ಬಿ. ಬಸವರಾಜು, ಕಾರ್ಯನಿರ್ವಹಕ ಟ್ರಸ್ಟಿ ಆಶಯ್ ಮಧು, ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿಗಳಾದ ಕಾರ್ಕಹಳ್ಳಿ ಬಸವೇಗೌಡ, ಮುದ್ದಯ್ಯ, ಮಿಮ್ಸ್ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಕಾರ್ಯಕ್ರಮದ ಸಂಯೋಜಕಿ ಮಮತನಾಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಜೀವಕೊಟ್ಟ ಹೆಣ್ಣಿನಿಂದ ಜೀವನ ರೂಪಿಸುವ ಶಕ್ತಿ: ಕೆ.ಆರ್.ನಂದಿನಿ

ಕೆ.ಎಂ.ದೊಡ್ಡಿ: ಜೀವಕೊಟ್ಟ ಹೆಣ್ಣು ತಮ್ಮ ಮಕ್ಕಳಿಗೆ ಜೀವನ ರೂಪಿಸುವ ಶಕ್ತಿ ಹೊಂದಿದ್ದಾಳೆ ಎಂದು ಜಿಪಂ ಸಿಇಒ ಕೆ.ಆರ್. ನಂದಿನಿ ತಿಳಿಸಿದರು.

ಶ್ರೀಮತಿ ಪದ್ಮ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಅವರು, ನಾವು ಪುರುಷ ದಿನಾಚರಣೆ ಆಚರಣೆ ಮಾಡುವುದಿಲ್ಲ. ಆದರೆ, ಸಮಾಜದಲ್ಲಿ ಹೆಣ್ಣಿನ ಶೋಷಣೆ ಸೇರಿದಂತೆ ಹಲವು ಹಕ್ಕಗಳಿಗಾಗಿ ಮಹಿಳೆ ದಿನಾಚರಣೆ ಚಾಲ್ತಿಯಲ್ಲಿದೆ ಎಂದರು.

ಕುಟುಂಬ ಎಂಬ ಕಾರ್ಖಾನೆಯಲ್ಲಿ ತಾಯಿಯೇ ಜನರಲ್ ಮ್ಯಾನೇಜರ್ ಆಕೆಗೆ ಎಂದು ರಜೆ ಇಲ್ಲ. ಕುಟುಂಬದ ಎಲ್ಲ ಸದಸ್ಯರನ್ನು ಸಂತೈಸುವ ಮಹಾತಾಯಿ ಹೆಣ್ಣು. ಆಕೆಯ ತ್ಯಾಗಕ್ಕೆ ಎಲ್ಲರೂ ತಲೆ ಭಾಗಬೇಕು. ಆ ನಿಟ್ಟಿನಲ್ಲಿ ಪದ್ಮ ಜಿ.ಮಾದೇಗೌಡರು ಮಾಡಿರುವ ಮಹಾತ್ ಕಾರ್ಯಗಳಿಗೆ ಹೆಗಲು ಕೊಟ್ಟಿರುವುದು ಸಾರ್ಥಕತೆ ಕಾಣುತ್ತದೆ ಎಂದರು.

ನಾನು ಮಾಡಬೇಕಾಗಿರುವ ಸಾಧನೆ ಇನ್ನು ಬೆಟ್ಟದಷ್ಟಿದೆ. ನನಗೆ ಸಿಕ್ಕಿರುವ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕಳೆದ 8 ವರ್ಷಗಳಿಂದ ನನ್ನನ್ನು ಪ್ರಶಸ್ತಿಗೆ ಆಹ್ವಾನಿಸುತ್ತಿದ್ದರು. ಆದರೆ, ಕಾರಣಾಂತಗಳಿಂದ ಬರುವುದಕ್ಕೆ ಆಗುತ್ತಿರಲಿಲ್ಲ. ಆದರೆ, ಈ ನನ್ನ ಮಂಡ್ಯದ ಮಣ್ಣಲ್ಲಿ ಅಧಿಕಾರಿಯಾಗಿರುವಾಗಲೇ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಮಂಡ್ಯ ಜಿಲ್ಲೆ ಪ್ರಗತಿಗೆ ನಾನು ಶಕ್ತಿ ಮೀರಿ ದುಡಿಯುತ್ತೇನೆ ಎಂದು ಹೇಳಿದರು.