ಸಾರಾಂಶ
ಸುರಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಸುರಪುರ
ಲಿಂಗ ಅಸಮಾನತೆ ಮಾಡಬಾರದು. ಶೈಕ್ಷಣಿಕ ನಿರ್ಬಂಧಗಳು ಹೇರಬಾರದು. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಬಾರದು. ಆರೋಗ್ಯ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ಹೇಳಿದರು.ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಮತ್ತು ಲಿಂಗ ಆಧಾರಿತ ಹಿಂಸೆಯಂತಹ ಕೃತ್ಯ ಮಾಡಬಾರದು. ಹೆಣ್ಣು ಮಗುವಿಗೂ ಗಂಡು ಮಗವಿನಷ್ಟೆ ಪ್ರಾಮುಖ್ಯತೆ ನೀಡಬೇಕು ಎಂದರು.
ಗರ್ಭಿಣಿಯರು ಸ್ಕ್ಯಾನಿಂಗ್ ಮೂಲಕ ಶಿಶುವಿನ ಲಿಂಗ ತಿಳಿದುಕೊಂಡು ಹಾಗೂ ಇತರೆ ಮೂಢನಂಬಿಕೆಯಿಂದ ಹೆಣ್ಣು ಮಗುವಿನ ಜನನವಾಗದಂತೆ ಭ್ರೂಣ ಹತ್ಯೆ ಈ ಭಾಗದಲ್ಲಿ ಮಾಡಲಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳ ಸಂಖ್ಯೆ ತೀರಾ ಕಡಿಮೆಯಿದೆ. ನಮ್ಮ ಯಾದಗಿರಿ ಜಿಲ್ಲೆಯ 100 ಗಂಡು ಮಕ್ಕಳಿಗೆ 969 ಹೆಣ್ಣು ಮಕ್ಕಳಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಸಮೀಪವಿರುವ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಹೆರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಬೇಕು. ಹೆಣ್ಣು ಮಗುವಿನ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಉತ್ತೇಜನೆ ನೀಡಲು ಹಲವು ಯೋಜನೆಗಳಿವೆ. ಆರೋಗ್ಯ ಇಲಾಖೆಯಲ್ಲಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಸಂಪೂರ್ಣ ಆರೋಗ್ಯ ಸೇವೆ ಉಚಿತವಾಗಿ ನೀಡಲಾಗುವುದು. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಅರವಳಿಕೆ ತಜ್ಞರಾದ ಡಾ. ಶ್ವೇತಾ, ಜಿಲ್ಲಾಮಟ್ಟದ ಅಧಿಕಾರಿಗಳು, ಗರ್ಭಿಣಿಯರು, ಬಾಣಂತಿಯರು, ಆಸ್ಪತ್ರೆ ಶೂಶ್ರುಷಕಿಯರು ಮತ್ತು ಸಿಬ್ಬಂದಿ ಸೇರಿದಂತೆ ಇತರರಿದ್ದರು.