ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಗುರುತಿನ ಚೀಟಿ ಪಡೆಯಿರಿ: ನ್ಯಾ. ನೂರುನ್ನೀಸಾ

| Published : Mar 21 2024, 01:01 AM IST

ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಗುರುತಿನ ಚೀಟಿ ಪಡೆಯಿರಿ: ನ್ಯಾ. ನೂರುನ್ನೀಸಾ
Share this Article
  • FB
  • TW
  • Linkdin
  • Email

ಸಾರಾಂಶ

ಬೆರಳೆಣಿಕೆಯಷ್ಟು ಮಾತ್ರ ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಗುರುತಿನ ಚೀಟಿ ಪಡೆದಿದ್ದು, ಉಳಿದೆಲ್ಲಾ ಲಿಂಗತ್ವ ಅಲ್ಪಸಂಖ್ಯಾತರು ಗುರುತಿನ ಚೀಟಿ ಪಡೆದು ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಬೆರಳೆಣಿಕೆಯಷ್ಟು ಮಾತ್ರ ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಗುರುತಿನ ಚೀಟಿ ಪಡೆದಿದ್ದು, ಉಳಿದೆಲ್ಲಾ ಲಿಂಗತ್ವ ಅಲ್ಪಸಂಖ್ಯಾತರು ಗುರುತಿನ ಚೀಟಿ ಪಡೆದು ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸ್ನೇಹಜ್ಯೋತಿ ಮಹಿಳಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದಮನಿತ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು, ಇಲಾಖಾ ಸೌಲಭ್ಯ ಗಳು, ಸ್ವೀಪ್ ಅರಿವು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಸಮಾಜದ ಏಳಿಗೆಗಾಗಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಇದರಿಂದ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಬಲಿಷ್ಠ ಪ್ರಜಾಪ್ರಭುತ್ವದ ರಾಷ್ಟ್ರ ನಿರ್ಮಾಣ ಮಾಡಲು ಸಹಾಯವಾಗುತ್ತದೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು ತಮ್ಮನ್ನು ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಲಿಂಗತ್ವ ಅಲಿಸಂಖ್ಯಾತರಿಗಾಗಿ ರೂಪಿಸಿರುವ ಕಾನೂನು-ಕಾಯ್ದೆ ಹಾಗೂ ಸರ್ಕಾರಿ ನೌಕರಿಯಲ್ಲಿ ಶೇ.೧ರಷ್ಟು ಮೀಸಲಾತಿ ಇರುವ ಬಗ್ಗೆ ಮಾಹಿತಿ ನೀಡಿದರಲ್ಲದೆ. ಅರ್ಹರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಭಾರತ ದೇಶ ಪ್ರಜಾಪ್ರಭುತ್ವ ದೇಶ. ಇಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕನ್ನು ಹೊಂದಿದ್ದು, ಮತದಾರರು ಏಪ್ರಿಲ್ ೨೬ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದರು.

ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಶೋಕ್ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಯನ್ನು ರಚಿಸಲಾಗಿದ್ದು, ಸ್ವೀಪ್ ಕಾರ್ಯಕ್ರಮದಡಿ ಮತದಾನ ಮಾಡುವ ಬಗ್ಗೆ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯ ಮತದಾನದ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.

ಪಯಣ ಸಂಸ್ಥೆ ನಿರ್ದೇಶಕ ಚಾಂದಿನಿ, ಸಾರಥ್ಯ ಒಕ್ಕೂಟದ ತ್ರಿಮೂರ್ತಿ ಅವರು ಮತದಾನ ಜಾಗೃತಿ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಶಶಿಧರ್, ಮೇಲ್ವಿಚಾರಕಿ ಮೋಹನ್ ಕುಮಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಜಾಹ್ನವಿ.ಎಸ್, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ದಮನಿತ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.