ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಏರುವ ಗುರಿ ಇಟ್ಟುಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಸಲಹೆ ನೀಡಿದರು. ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ಸಮತಾ ಸೊಸೈಟಿ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೈಂಗಿಕ ಮತ್ತು ಅಲ್ಪಸಂಖ್ಯಾತರ ಅರಿವು ಹಾಗೂ ಮತದಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಲಿಂಗತ್ವ ಅಲ್ಪಸಂಖ್ಯಾತರು ಶಿಕ್ಷಣ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದೆ ಬರಬೇಕು. ಶೈಕ್ಷಣಿಕವಾಗಿ ಅಭಿವೃದ್ದಿಯಾಗಿ ಉನ್ನತ ಹುದ್ದೆಗಳನ್ನು ಪಡೆಯಬೇಕು. ಸಣ್ಣ ಪುಟ್ಟ ಕೆಲಸಗಳಿಗೆ ತೃಪ್ತಿ ಪಡಬಾರದು. ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ಸಂದೇಶವನ್ನು ಪಾಲಿಸಿ ಉತ್ತಮ ಗುರಿ ಇಟ್ಟುಕೊಂಡು ಸಾಧನೆ ಮಾಡಿದರೆ ಸಮಾಜದಲ್ಲಿ ಗೌರವ ಸಿಗಲಿದೆ ಎಂದರು.ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ ಹಾಗೂ ಅವರ ಶ್ರೇಯೋಭಿವೃದ್ದಿಗೆ ನೆರವಾಗಲು ಪೂರಕವಾಗಿರುವ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ನೋವು ಅರ್ಥ ಮಾಡಿಕೊಂಡಿರುವ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಅರಿವಿನ ಕಾರ್ಯಕ್ರಮ ಏರ್ಪಡಿಸಿ ಒದಗಿಸಬೇಕಿರುವ ಸೌಲಭ್ಯಗಳಿಗೆ ಮುಂದಾಗಿರುವುದು ವಿಶೇಷವಾಗಿದೆ. ಇಂತಹ ಉತ್ತಮ ಕಾರ್ಯಕ್ಕೆ ತೊಡಗಿರುವ ಜಿಲ್ಲಾಧಿಕಾರಿಯವರಿಗೆ ಧನ್ಯವಾದಗಳನ್ನು ಹೇಳಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಇರುವ ತಾತ್ಸಾರ, ತಪ್ಪು ಕಲ್ಪನೆ, ನಕಾರಾತ್ಮಕ ಧೋರಣೆ ಬದಲಾಗಬೇಕು. ಈ ಸಮುದಾಯವನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅವರಿಗೆ ಸಿಗಬೇಕಿರುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಸದಾಶಯದೊಂದಿಗೆ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು. ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ತಳಮಟ್ಟದಲ್ಲಿ ವಿವಿಧ ಇಲಾಖೆಗಳಿಂದ ನೆರವು ಸಿಗಬೇಕಿದೆ. ಉದ್ಯೋಗ ಖಾತರಿ ಯೋಜನೆ ಇರಬಹುದು, ಆರೋಗ್ಯ, ರಕ್ಷಣೆ, ಇನ್ನಿತರ ಯಾವುದೇ ಇಲಾಖೆಗಳ ಸೌಲಭ್ಯಗಳೇ ಇರಲಿ ಈ ಸಮುದಾಯಕ್ಕೆ ಆದ್ಯತೆ ದೊರಕಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಅಧಿಕಾರಿಗಳು ಸ್ಪಂದಿಸಿ ಸವಲತ್ತು ತಲುಪಿಸುವಲ್ಲಿ ಜಿಲ್ಲೆ ಮಾದರಿಯಾಗಬೇಕು ಎಂದು ತಿಳಿಸಿದರು.ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿಯನ್ನು ಹೆಚ್ಚು ಸಂಖ್ಯೆಯಲ್ಲಿ ಮೊದಲ ಬಾರಿಗೆ ವಿತರಿಸಲು ಆರಂಭಿಸಿದ್ದು ಚಾಮರಾಜನಗರ ಜಿಲ್ಲೆಯಾಗಿದೆ. ಇದರಿಂದ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಣ ಪಡೆಯಲು ಯಾವುದೇ ಹಂತದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಶಾಲಾ ಕಾಲೇಜು ಪ್ರವೇಶಾತಿ, ವಸತಿ ನಿಲಯ, ಕೌಶಲ ತರಬೇತಿ, ಬೌದ್ಧಿಕ ಸಾಮರ್ಥ್ಯ ಹೆಚ್ಚುಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಸಮಗ್ರವಾದ ಕಾರ್ಯವಿಧಾನ ರೂಪಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ ಮಾತನಾಡಿ, ಅನ್ಯಾಯ, ಶೋಷಣೆಗೆ ಒಳಗಾದ ಸಮುದಾಯಗಳಿಗೆ ಸ್ಪಂದಿಸಿ ಸರ್ಕಾರದ ಅನುಕೂಲಗಳನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಸಂವೇದನಾ ಶೀಲರಾಗಿ ಕಾರ್ಯನಿರ್ವಹಿಸಬೇಕಿದೆ. ಇದಕ್ಕಾಗಿಯೇ ಜಿಲ್ಲಾಧಿಕಾರಿಯವರು ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಗಾರ ಏರ್ಪಾಡು ಮಾಡಿರುವುದು ಅತ್ಯುತ್ತಮ ಕೆಲಸವಾಗಿದೆ ಎಂದರು. ಪ್ರತಿಯೊಬ್ಬರಿಗೂ ಘನತೆ ಗೌರವದಿಂದ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಸರಿ ಸಮನಾದ ಎಲ್ಲಾ ಅವಕಾಶಗಳನ್ನು ಪಡೆಯಬೇಕಿದೆ. ದೃತಿಗೆಡದೆ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಬದಲಾಗಬೇಕು. ಗುರುತರವಾದ ಸ್ಥಾನ ಪಡೆದುಕೊಳ್ಳಬೇಕು. ಕಾನೂನು ನೆರವು ಅಗತ್ಯವಿದ್ದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಸಹಾಯ ಮಾಡಲಿದೆ ಎಂದು ತಿಳಿಸಿದರು. ಸಮತಾ ಸೊಸೈಟಿಯ ಅಧ್ಯಕ್ಷರಾದ ದೀಪ ಬುದ್ದೆ ಅವರು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಜಿಲ್ಲೆಯಲ್ಲಿ ಗುರುತಿನ ಕಾರ್ಡುಗಳನ್ನು ವಿತರಿಸಿ ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿದೆ. ಶಿಕ್ಷಣ, ಉದ್ಯೋಗ ಪಡೆದು ದಿಟ್ಟ ಜೀವನ ನಡೆಸಬೇಕು. ಜಿಲ್ಲಾಧಿಕಾರಿಗಳು ನಮ್ಮ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡು ಸಮುದಾಯದ ಪರವಾಗಿ ಹಲವು ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿದ್ದಾರೆ. ತಾಲೂಕು ಜಿಲ್ಲಾ ಮಟ್ಟದಲ್ಲಿಯೂ ಸಭೆ ನಡೆದಿದ್ದು, ಇದೀಗ ಜಿಲ್ಲಾ ಮಟ್ಟದ ಕಾರ್ಯಗಾರ ಆಯೋಜನೆ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲಾಧಿಕಾರಿಯವರಿಗೆ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ನುಡಿದರು. ಬೆಂಗಳೂರಿನ ಪಯಣ ಸಂಸ್ಥೆಯ ಚಾಂದಿನಿ ಅವರು ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತರ ವಿವಿಧತೆ ಕುರಿತು, ಜೀವ ಸಂಸ್ಥೆಯ ಪಿ.ಉಮಾ ಅವರು ಲಿಂಗತ್ವ ಅಲ್ಪಸಂಖ್ಯಾತರ ಅಸ್ತಿತ್ವಕ್ಕಾಗಿ ಸಾಮಾಜಿಕ ಹೋರಾಟಗಳ ಕುರಿತು, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಮಲ್ಲಮ್ಮ ಕುಂಬಾರ್ ಅವರು ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಸರ್ಕಾರಿ ಯೋಜನೆಗಳು ಮತ್ತು ಟ್ರಾನ್ಸ್ ಜೆಂಡರ್ ಪಾಲಿಸಿ 2071 ರ ಬಗ್ಗೆ, ಸಾರಥ್ಯ ಒಕ್ಕೂಟದ ಕೆ. ತ್ರಿಮೂರ್ತಿ ವಿಶಿಷ್ಟ ಲೈಂಗಿಕತೆ ಅಲ್ಪಸಂಖ್ಯಾತರು ಕುರಿತು ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಹಸೀಲ್ದಾರ್ ಬಸವರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಿ.ಪಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ, ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಭಿವೃದ್ದಿ ನಿರೀಕ್ಷಕ ಶಿವಲೀಲ ಬೆಟಗೇರಿ ಉಪಸ್ಥಿತರಿದ್ದರು.