ಗೋಪಾಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಆರಂಭ: ಮಾಹಿತಿ ನೀಡಿ

| Published : Aug 29 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರದ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದದ ಪ್ರಾಧ್ಯಾಪಕಿ ರೇಖಾ ಕೆ. ಜಾಧವ್‌ ಅವರು ನೇತೃತ್ವದಲ್ಲಿ ಅಧ್ಯಯನಕ್ಕಕಾಗಿ ಸಂಶೋಧನಾ ತಂಡವನ್ನು ರಚಿಸಲಾಗಿದೆ. ಅಧ್ಯಯನಕ್ಕಾಗಿ ರಾಜ್ಯ ಸರ್ಕಾರದಿಂದ 13 ಲಕ್ಷವನ್ನು ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಗೋಪಾಲಕರಿಗೆ ಸಂಬಂಧಿಸಿದಂತೆ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹೀಗೆ ಸಮಗ್ರ ಅಂಶಗಳನ್ನು ಒಳಗೊಂಡಂತೆ ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದಲ್ಲಿ ಅಧ್ಯಯನವು ಈಗಾಗಲೇ ಆರಂಭಗೊಂಡಿದ್ದು, ಸಮುದಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ರಾಜ್ಯ ಸರ್ಕಾರದ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದದ ಪ್ರಾಧ್ಯಾಪಕಿ ರೇಖಾ ಕೆ. ಜಾಧವ್‌ ಅವರು ನೇತೃತ್ವದಲ್ಲಿ ಅಧ್ಯಯನಕ್ಕಕಾಗಿ ಸಂಶೋಧನಾ ತಂಡವನ್ನು ರಚಿಸಲಾಗಿದೆ. ಅಧ್ಯಯನಕ್ಕಾಗಿ ರಾಜ್ಯ ಸರ್ಕಾರದಿಂದ 13 ಲಕ್ಷವನ್ನು ಬಿಡುಗಡೆ ಮಾಡಿದೆ.

ಸರ್ಕಾರದ ಹಿಂದುಳಿದ ಜಾತಿಗಳ ಪಟ್ಟಿ ಕ್ರಮ ಸಂಖ್ಯೆ 86ರ ಅಡಿಯಲ್ಲಿ ಬರುವಂತೆ ಗೊಲ್ಲ, ಯಾದವ್, ಅಸ್ಥಾನ ಗೊಲ್ಲ, ಯಾದವ, ಅಡವಿಗೊಲ್ಲ, ಗೋಪಾಲ, ಗೋಪಾಲಿ, ಗೌಳಿ, ಗವಳಿ, ಅನುಬರು, ಹನಬರು, ಕವಾಡಿ, ಕೊಲಾಯನ್, ಕೊನಾರ್, ಕೊನ್ನೂರ್, ಕೃಷ್ಣ ಗವಾಲಿ, ಕೃಷ್ಣಗೊಲ್ಲ, ಮನಿಯಾನಿ, ಊರಳಿ, ತೆಲುಗು ಗೌಡ ಸೇರಿದಂತೆ 23 ಉಪಜಾತಿಗಳನ್ನು ಹೊಂದಿದೆ.

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಹೀಗೆ ಇನ್ನೂ ಅನೇಕ ಜಿಲ್ಲೆಗಳಲ್ಲಿನ ತಾಲೂಕುಗಳಲ್ಲಿ ವಾಸವಿರುವ ಗೋಪಾಲ ಸಮುದಾಯದ ಜನರನ್ನು ಭೇಟಿ ಮಾಡಿ ಅವರ ನೈಜ ಸ್ಥಿತಿಯನ್ನು ತಿಳಿದು ಕೊಳ್ಳುವುದರ ಉದ್ದೇಶವನ್ನು ಈ ಅಧ್ಯಯನವು ಹೊಂದಿದೆ. ಜುಲೈ 2025 ರಿಂದ ಗೋಪಾಲರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಯೋಜನೆಯಲ್ಲಿರುವ ಸಹ ಸಂಶೋಧಕರಾದ ಡಾ.ಕೆ.ಎಸ್. ಲಕ್ಷ್ಮಿ ಮತ್ತು ಡಾ.ಎ.ಎನ್. ಕುಮಾರಸ್ವಾಮಿ ಅವರು ಕಲೆ ಹಾಕುತ್ತಿದ್ದಾರೆ.

ಈ ಅಧ್ಯಯನಕ್ಕೆ ಡಿ. ದೇವರಾಜ ಅಧ್ಯಯನ ಸಂಸ್ಥೆಯು 15 ತಿಂಗಳ ಕಾಲಾವಕಾಶ ನೀಡಿದ್ದು, ಗೋಪಾಲರಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಸರ್ಕಾರದ ಆದೇಶದಂತೆ ಸಾಕ್ಷ್ಯಚಿತ್ರವನ್ನು ತಯಾರಿಸಬೇಕು. ಅದಕ್ಕಾಗಿ ಅಧ್ಯಯನಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಗೋಪಾಲ ಸಮುದಾಯವು ಸರ್ಕಾರ ಸೌಲಭ್ಯಗಳಿಂದ ವಂಚಿತರಾಗಿದ್ದು, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಿಂದುಳಿದ್ದು, ಆ ಸಮುದಾಯವನ್ನು ಸಮಾಜದ ಮುಖ್ಯ ಭೂಮಿಕೆ ತರಲು ಸರ್ಕಾರವು ಕೈಗೊಳ್ಳಬಹುದಾದ ಅನುಷ್ಠಾನ ಕಾರ್ಯಕ್ರಮಗಳನ್ನು ಕುರಿತು ಯೋಜನಾ ವರದಿಯಲ್ಲಿ ಸಲ್ಲಿಸಲಾಗುವುದು. ಈ ಅಧ್ಯಯನವು ಗುಂಪು, ಚರ್ಚೆ, ಸಮೀಕ್ಷೆ, ಸಂದರ್ಶನ, ವಿಚಾರ ಸಂತಿಕರಣ, ಕಾರ್ಯಾಗಾರ, ಮೌಲ್ಯಮಾಪನವನ್ನು ಒಳಗೊಂಡಿದೆ. ಗೋಪಾಲ ಸಮುದಾಯಕ್ಕೆ ಸಂಬಂಧಿಸಿದಂತೆ ಮಾಹಿತಿಯುಳ್ಳವರು ಮಹಾರಾಜ ಕಾಲೇಜಿನಲ್ಲಿರುವ ಕಚೇರಿಯನ್ನು ಅಥವಾ ಮೊ. 9986713964, 7829977572 ಸಂಪರ್ಕಿಸಬಹುದು ಎಂದು ಈ ಅಧ್ಯಯನದ ಯೋಜನಾ ನಿರ್ದೇಶಕಿ ಪ್ರೊ. ರೇಖಾ ಕೆ. ಜಾಧವ್ ತಿಳಿಸಿದ್ದಾರೆ.