ಸಾಮಾನ್ಯಸಭೆ: ಸ್ವ ಪಕ್ಷೀಯ ಸದಸ್ಯರಿಂದ ಅಧ್ಯಕ್ಷರಿಗೆ ಟಕ್ಕರ್‌

| Published : Jul 11 2024, 01:36 AM IST

ಸಾಮಾನ್ಯಸಭೆ: ಸ್ವ ಪಕ್ಷೀಯ ಸದಸ್ಯರಿಂದ ಅಧ್ಯಕ್ಷರಿಗೆ ಟಕ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸ್ವಪಕ್ಷದ ಸದಸ್ಯರ ಅಸಹಕಾರದಿಂದ ಮುಂದುವರಿದಿರುವ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಮತ್ತೆ ಸ್ವಪಕ್ಷೀಯ ಸದಸ್ಯರ ಟೀಕೆ, ಪ್ರತಿಭಟನೆ, ಗದ್ದಲ ಎದುರಿಸಿದರು.

ದಿಢೀರ್‌ ಸಭೆ ಮುಗಿಸಿ ಹೊರ ನಡೆದ ಅಧ್ಯಕ್ಷರು । ಬಿಜೆಪಿ - ಜೆಡಿಎಸ್‌ ಸದಸ್ಯರಿಂದ ಪ್ರತಿಭಟನೆ । ಅಧ್ಯಕ್ಷರ ನಡೆಗೆ ತೀವ್ರ ಆಸಮಧಾನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸ್ವಪಕ್ಷದ ಸದಸ್ಯರ ಅಸಹಕಾರದಿಂದ ಮುಂದುವರಿದಿರುವ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಮತ್ತೆ ಸ್ವಪಕ್ಷೀಯ ಸದಸ್ಯರ ಟೀಕೆ, ಪ್ರತಿಭಟನೆ, ಗದ್ದಲ ಎದುರಿಸಿದರು.

ಕಳೆದ ಒಂದು ವರ್ಷದಿಂದ ಅಧ್ಯಕ್ಷರು ಸಾಮಾನ್ಯಸಭೆ ಮೊಟಕುಗೊಳಿಸಿ ಹೊರ ನಡೆಯುವ ಚಾಳಿಯನ್ನು ಈ ಬಾರಿ ಸಭೆಯಲ್ಲೂ ರಿಪೀಟ್‌ ಮಾಡಿದರು. ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡು ಬಂದಿರುವಂತೆ ಸಭೆ ಆರಂಭದ ಅರ್ಧ ತಾಸಿ ನಲ್ಲಿ ವಿದಾಯ ಭಾಷಣ ಮಾಡಿದರು. 24 ತಿಂಗಳ ಕಾಲ ಸಹಕರಿಸಿದ ಜನಪ್ರತಿನಿಧಿಗಳಿಗೆ ಧನ್ಯವಾದ ಹೇಳಿದರು. ಇದು, ಕೂಡ ಮತ್ತೊಂದು ಚರ್ಚೆ ಹುಟ್ಟು ಹಾಕಿತು.

ಜೆಡಿಎಸ್‌ ಸದಸ್ಯ ಕುಮಾರಗೌಡ ಮಾತನಾಡಿ, ಅಧ್ಯಕ್ಷರ 2 ವರ್ಷಗಳ ಅಧಿಕಾರದ ಅವಧಿ ತೃಪ್ತಿಕರವಾಗಿಲ್ಲ, ಸಾಮಾನ್ಯ ಸಭೆ ನಡೆಸುವಾಗ ಅರ್ಧಕ್ಕೆ ಎದ್ದು ಹೋಗುವುದು ಎಂದರು.

ನಗರದಲ್ಲಿ ಉದ್ಯಾನವನಗಳ ಅಭಿವೃದ್ಧಿ ಕೆಲಸ ಆಗಿಲ್ಲ, ವಿರೋಧ ಮಾಡುವ ಸದಸ್ಯರನ್ನು ತಡೆಯಲು ನಗರಸಭೆ ಕಟ್ಟಡದ ಹೊರ ಭಾಗದಲ್ಲಿ ದ್ವಾರ ಪಾಲಕರನ್ನು ನಿಲ್ಲಿಸುವುದು, ಸದಸ್ಯತ್ವ ರದ್ದುಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಛೇಡಿಸಿದರು. ಆಗ ಕಾಂಗ್ರೆಸ್‌ನ ಮುನೀರ್‌ ಮಾತನಾಡಿ, ಇದಕ್ಕೆಲ್ಲಾ ನೀವು ಕಾರಣ, ನಿಮ್ಮ ಬೆಂಬಲದಿಂದ ತಾನೇ ಅವರು ಅಧ್ಯಕ್ಷರಾದರೆಂದು ಹೇಳಿದರು.ಖಾತೆ ರದ್ದು;

ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಸರ್ಕಾರಿ ಜಾಗಕ್ಕೆ ಬೀಕನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಹಕ್ಕುಪತ್ರ ಪಡೆದು ನಗರ ಸಭೆಯಲ್ಲಿ ಖಾತೆ ಮಾಡಿಸಲಾಗಿದೆ. ಸುಮಾರು 30 ಸೈಟ್‌ಗಳು ಈ ರೀತಿ ಮಾರಾಟವಾಗಿವೆ. ಇದರ ಬಗ್ಗೆ ತನಿಖೆ ನಡೆಸ ಬೇಕೆಂದು ಸದಸ್ಯೆ ಕವಿತಾ ಶೇಖರ್‌ ಹೇಳಿದರು.

ಕಳೆದ ಮೂರು ತಿಂಗಳ ಹಿಂದೆಯೇ ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಜತೆಗೆ ಲೋಕಾಯುಕ್ತರಿಗೂ ದೂರು ಸಲ್ಲಿಸಲಾಗಿದೆ ಎಂದಾಗ, ಪೌರಾಯುಕ್ತ ಬಿ.ಸಿ. ಬಸವರಾಜ್ ಉತ್ತರಿಸಿ ಕಳೆದ 6 ತಿಂಗಳ ಹಿಂದೆಯೇ ಅಲ್ಲಿನ ಎಲ್ಲಾ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದರು.

ಮತ್ತೆ ಕುಮಾರಗೌಡ ಮಾತನಾಡಿ, ಅಧ್ಯಕ್ಷರ ಪರವಾಗಿ ಹಾಗೂ ವಿರುದ್ಧವಾಗಿ ಎಷ್ಟು ಮಂದಿ ಸದಸ್ಯರು ಇದ್ದಾರೆಂದು ಪ್ರಶ್ನೆ ಮಾಡುತ್ತಿದ್ದಂತೆ ಅಧ್ಯಕ್ಷರು ಮಾತನಾಡಿ, ಅಜೆಂಡಾದಲ್ಲಿನ ಎಲ್ಲಾ ವಿಷಯಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿ ಸಭೆಯಿಂದ ನಿರ್ಗಮಿಸಿದರು. ಕಾಂಗ್ರೆಸ್‌ ಸದಸ್ಯರು ಅವರನ್ನು ಹಿಂಬಾಲಿಸಿದರು. ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರ ನಡೆದರು.ಪ್ರತಿಭಟನೆ:

ಅಧ್ಯಕ್ಷರ ನಡೆ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್‌ ನಗರಸಭಾ ಸದಸ್ಯರು ಧರಣಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಾರಗೌಡ, ನಗರಸಭೆ ಖಾತೆಯಲ್ಲಿ ಹಣ ಇಲ್ಲ, ಆದರೂ ಕೂಡ ಸುಮಾರು 10 ಕೋಟಿ ರು.ಗಳ ಕಾಮ ಗಾರಿಗಳಿಗೆ ಒಪ್ಪಿಗೆ ಇದೆ ಎಂದು ಭಾವಿಸಿ ಸಭೆಯಿಂದ ಓಡಿ ಹೋಗಿದ್ದಾರೆ. ಹಲವು ಕಾಮಗಾರಿಗಳು ಕಳಪೆಯಾಗಿವೆ, ಅಕ್ರಮ ನಡೆದಿದೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಬಿಜೆಪಿಯ ಟಿ. ರಾಜಶೇಖರ್‌ ಮಾತನಾಡಿ, ಕಳೆದ ಮೂರು ತಿಂಗಳಿಂದ ನಗರದ ಎಂ.ಜಿ. ರಸ್ತೆಯಲ್ಲಿ ವಿದ್ಯುತ್ ಬೀದಿ ದೀಪ ಗಳಿಲ್ಲ, ಅಧ್ಯಕ್ಷರು ನಗರಸಭೆಯನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಗುತ್ತಿಗೆದಾರರಿಂದ ಕಿಕ್ ಬ್ಯಾಕ್‌ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆ ಬಳಿಕ ನಗರಸಭೆ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಮನವಿ ಸಲ್ಲಿಸಿದರು.

-- ಬಾಕ್ಸ್‌ --

ಡೆಂಘೀ ಜ್ವರ ಬರ್ತಾ ಇರೋದು ಸೊಳ್ಳೆಯಿಂದ ಅಲ್ಲಚಿಕ್ಕಮಗಳೂರು ನಗರದಲ್ಲಿ ಡೆಂಘೀ ಜ್ವರ ಪ್ರಕರಣ ಜಾಸ್ತಿ ಆಗ್ತಾ ಇದೆ. ಈ ಜ್ವರ ಬರ್ತಾ ಇರೋದು ಸೊಳ್ಳೆಯಿಂದ ಅಲ್ಲ, ಮನೆ ಮನೆಗಳ ಕಸವನ್ನು ಸಂಗ್ರಹ ಸರಿಯಾಗಿ ಮಾಡ್ತಾ ಇಲ್ಲ, ಅದ್ದರಿಂದ ಡೆಂಘೀ ಜ್ವರ ಬರ್ತಾ ಇದೆ.

- ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರೋರ್ವರು ಹೇಳಿದ ಈ ಮಾತು ಸಭೆಯಲ್ಲಿದ್ದವರಿಗೆ ಹಾಸ್ಯವೆನಿಸಿತು. ಆಗ ಬಿಜೆಪಿ ಸದಸ್ಯರು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಮನೆ ಮನೆಯಿಂದ ಕಸ ಸಂಗ್ರಹ ಮಾಡದೆ ದಿರುವುದರಿಂದ ಡೆಂಘೀ ಬರ್ತಾ ಇದೆ ಎನ್ನುವುದಾದರೆ ಕಸ ಸಂಗ್ರಹ ಜವಾಬ್ದಾರಿ ವಹಿಸಿಕೊಂಡಿರುವ ಸಂಸ್ಥೆಯವರಿಗೆ ಕರೆದು ಮಾತನಾಡಿ, ಇಲ್ಲದೆ ಹೋದರೆ, ಬೇರೆಯವರಿಗೆ ಟೆಂಡರ್‌ ಕೊಡಿ, ಅದು ಆಗದೆ ಹೋದರೆ ನಗರಸಭೆ ಸಿಬ್ಬಂದಿಗೆ ಮನೆ ಮನೆ ಕಸ ಸಂಗ್ರಹಿಸಿ ಆ ಮೂಲಕವಾದ್ರು ಡೆಂಘೀ ಕಡಿಮೆಯಾಗಲಿ ಎಂದು ಟಿ. ರಾಜಶೇಖರ್‌ ಛೇಡಿಸಿದರು.

10 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯಸಭೆ ನಡೆಯಿತು. ಉಪಾಧ್ಯಕ್ಷ ಅಮೃತೇಶ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌ ಇದ್ದರು.

--ಪೋಟೋ ಫೈಲ್್‌ ನೇಮ್‌ 10 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರು ಏಕ ಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಬಾರೆದಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್‌ ನಗರಸಭೆ ಸದಸ್ಯರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಗೆ ಮನವಿ ಸಲ್ಲಿಸಿದರು.