ಸಾರಾಂಶ
ಮುಂಡಗೋಡ: ೨೧ನೇ ಶತಮಾನ ಸಾಮರ್ಥ್ಯ ಮತ್ತು ಯೋಗ್ಯತೆಯ ಶತಮಾನವಾಗಿದ್ದು, ಪುಸ್ತಕ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನ ಕೂಡ ಅತ್ಯವಶ್ಯವಾಗಿದ್ದು, ದೇಶ- ವಿದೇಶಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಮಂಗಳವಾರ ಸಂಜೆ ತಾಲೂಕಿನ ಮಳಗಿ ಗ್ರಾಮದಲ್ಲಿ ಸುಮಾರು ₹೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಮೆಟ್ರಿಕ್ ನಂತರದ ವಸತಿಗೃಹ(ಹಾಸ್ಟೆಲ್) ಉದ್ಘಾಟಿಸಿ ಮಾತನಾಡಿದರು.ಎಸ್ಎಸ್ಎಲ್‌ಸಿ ನಂತರ ಹೆಣ್ಣುಮಕ್ಕಳು ಕಲಿಕೆ ಮೊಟಕುಗೊಳ್ಳಬಾರದೆಂಬ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಪಿಯುಸಿ ಕಾಲೇಜು ಶಿಕ್ಷಣ ಪಡೆಯುವ ವಯಸ್ಸು. ಜೀವನದ ಗುರಿ ನಿರ್ಧಾರ ಮಾಡುವ ಕಾಲವಾಗಿದ್ದು, ಈ ಹಂತದಲ್ಲಿ ಯಾವುದೇ ತಪ್ಪು ದಾರಿ ತುಳಿಯದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವ ಮೂಲಕ ಮಕ್ಕಳು ಒಳ್ಳೆಯ ಭವಿಷ್ಯದ ಗುರಿ ಇಟ್ಟುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮಳಗಿ ಗ್ರಾಪಂ ಅಧ್ಯಕ್ಷೆ ಕಸ್ತೂರಿ ತಳವಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಗೌಡ ಪಾಟೀಲ್, ತಹಸೀಲ್ದಾರ್ ಶಂಕರ ಗೌಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಮೋದ ದವಳೆ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಚೇತನ ನಾಯ್ಕ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ಪ್ರದೀಪ ಭಟ್, ಗುತ್ತಿಗೆದಾರರಾದ ಆರ್.ಎಸ್. ಸಜ್ಜನಶೆಟ್ಟರ, ಪ್ರಮುಖರಾದ ಆರ್.ಜಿ. ನಾಯ್ಕ, ಅಶೋಕ ಶಿರ್ಶಿಕರ, ಸೇರಿದಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ, ತಾಲೂಕಾಧಿಕಾರಿ ಎ.ಎಚ್. ಕರಿಯಪ್ಪ ಮುಂತಾದವರು ಉಪಸ್ಥಿತರಿದ್ದರು. ಎ.ಎಚ್. ಕರಿಯಪ್ಪ ಸ್ವಾಗತಿಸಿದರು. ಪ್ರಾಂಶುಪಾಲ ಗಣೇಶ ಹೆಗಡೆ ನಿರೂಪಿಸಿ, ವಂದಿಸಿದರು.ವಿವಿಧೆಡೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಸಿದ್ದಾಪುರ: ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ₹೨ ಕೋಟಿ ವೆಚ್ಚದಲ್ಲಿ ತಾಲೂಕಿನ ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಬೇಡ್ಕಣಿ ಶನೈಶ್ಚರ ದೇವಸ್ಥಾನದ ಎದುರಿನ ರಸ್ತೆ ಹಾಗೂ ಶನೈಶ್ಚರ ದೇವಾಲಯದ ಹಿಂಬದಿಯ ಗುಂಜಗೋಡ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕಡಕೇರಿಯ ಈಶ್ವರ ದೇವಸ್ಥಾನದ ಹಿಂಬದಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆ- ಮತ್ತಿಗಾರ ರಸ್ತೆ, ಭಂಡಾರಕೇರಿ ಮುಖ್ಯ ರಸ್ತೆಯಿಂದ ಕಲ್ಮನೆ ರಸ್ತೆ, ಮಾವಿನಗಟ್ಟ ಏರಿಯಿಂದ ಕೋಡ್ಸರ ಸಹಿಪ್ರಾ ಶಾಲೆ ರಸ್ತೆ, ಸಹಿಪ್ರಾ ಶಾಲೆ ಹಾರ್ಸಿಕಟ್ಟಾದಿಂದ ಈಶ್ವರ ದೇವಸ್ಥಾನದ ರಸ್ತೆ, ಉಯ್ಯಾಲೆಮನೆ ರಸ್ತೆ ಹಾಗೂ ಮುಟ್ಟಳ್ಳಿ, ಓಣಿತೋಟ ಹಾಗೂ ಗಾಳಿಜಿಡ್ಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಗಳ ಸುಧಾರಣೆಗಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿವೆ. ನಾನು ಕೇವಲ ಭರವಸೆ ನೀಡುವ ಶಾಸಕನಲ್ಲ. ಕೃತಿಯ ಮೂಲಕ ಮಾಡುವ ಜನಪ್ರತಿನಿಧಿ ಎಂದರು.ಈ ಸಂದರ್ಭದಲ್ಲಿ ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.