ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನದ ಪೂರ್ವ ಭಾಗದ ತಡೆಗೋಡೆ ಎತ್ತರಿಸುವುದು ಹಾಗೂ ಸ್ಮಾರಕ ಭವನದ ಉತ್ತರ ಭಾಗದಲ್ಲಿ ತಡೆಗೋಡೆ ಮುಂದುವರಿದ ಕಾಮಗಾರಿ ಕೈಗೊಳ್ಳುವ ಸಂಬಂಧ ಅಂದಾಜು ಪಟ್ಟಿ ಸಲ್ಲಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಭವನದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭವನದ ಪಶ್ಚಿಮ ಭಾಗದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆ ಕಟ್ಟಡ ಕಾಮಗಾರಿಯಿಂದ ತಡೆಗೋಡೆಯ ಎತ್ತರ ಕಡಿಮೆಯಾಗಿದ್ದು, ಈ ಸಂಬಂಧ ಅಂದಾಜು ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.ಸ್ಮಾರಕ ಭವನದ ಉತ್ತರ ಭಾಗದಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಉಳಿದ ಕಾಮಗಾರಿ ಕೈಗೊಳ್ಳಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯುವ ಸಂಬಂಧ ಅಂದಾಜು ಪಟ್ಟಿ ಸಲ್ಲಿಸುವಂತೆ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಭವನದ ಹಿಂಭಾಗದಲ್ಲಿನ ತಡೆಗೋಡೆ ನಿರ್ಮಾಣಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರು. ಬಿಡುಗಡೆಯಾಗಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದುವರಿದ ಕಾಮಗಾರಿ ಕೈಗೊಳ್ಳಬೇಕಿದೆ. ಜೊತೆಗೆ ಹಿಂಭಾಗದಲ್ಲಿ ಗೇಟ್ ಅಳವಡಿಸಬೇಕಿದೆ ಎಂದರು.ಭವನದ ಮುಂಭಾಗದಲ್ಲಿ ಸ್ಮಾರಕ ಭವನದ ವೀಕ್ಷಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಟೆಂಡರ್ ಆಹ್ವಾನಿಸಲು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಮ್ಯೂಸಿಯಂ ಒಳಭಾಗದಲ್ಲಿ ಕೆಲವು ಕಡೆ ಗಾಜಿನ ಫಲಕ ಅಳವಡಿಸುವುದು, ಸ್ಮಾರಕ ಭವನದ ಕಾರಂಜಿ ದುರಸ್ತಿಯಾಗಿದ್ದು, ಸರಿಪಡಿಸುವುದು ಮತ್ತಿತರ ಪ್ರಸ್ತಾಪಗಳಿಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದರು.ಸಮಿತಿಯ ವಿಶೇಷ ಆಹ್ವಾನಿತ ಅನಿಲ್ ಎಚ್.ಟಿ. ಮಾತನಾಡಿ, ಭವನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿಟ್ಟಿನಲ್ಲಿ ನಗರದ ಓಂಕಾರೇಶ್ವರ ದೇವಾಲಯ ಮತ್ತು ಅಬ್ಬಿಪಾಲ್ಸ್ ಬಳಿ ಫಲಕ ಅಳವಡಿಸುವುದು ಅಗತ್ಯ. ಭವನ ಅಭಿವೃದ್ಧಿ ಸಂಬಂಧಿಸಿದಂತೆ ‘ಮಾಹಿತಿ ಪುಸ್ತಕ’ ಹೊರತರುವುದು ಅಗತ್ಯ ಎಂದು ಸಲಹೆ ನಿಡಿದರು.
ಭವನದಲ್ಲಿ ಹೊರಗುತ್ತಿಗೆಯಡಿ 7 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ಟೆಂಡರ್ ಆಹ್ವಾನಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದರು.ನಗರದಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕುಶಾಲನಗರ ಕಲಾಭವನಕ್ಕೆ 1 ಕೋಟಿ ರು. ಬಿಡುಗಡೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಭಾಗಮಂಡಲ ಮತ್ತು ಪೊನ್ನಂಪೇಟೆಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ತಲಾ 5 ಲಕ್ಷ ರು. ಬಿಡುಗಡೆಯಾಗಿದ್ದು, ಜಾಗ ಒದಗಿಸಬೇಕಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಸುಬೇದಾರ್ ಮೇಜರ್(ನಿವೃತ್ತ) ಗೌಡಂಡ ತಿಮ್ಮಯ್ಯ ಹಾಗೂ ರಮ್ಯಾ ಅವರು ಸ್ಮಾರಕ ಭವನ ನಿರ್ವಹಣೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ನಾಯಕ್, ಸಹಾಯಕ ಎಂಜಿನಿಯರ್ ಸತೀಶ್, ತಹಸೀಲ್ದಾರ್ ರಮೇಶ್ ಬಾಬು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ, ಪೌರಾಯುಕ್ತ ವಿಜಯ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಘವೇಂದ್ರ, ಮಣಜೂರು ಮಂಜುನಾಥ್ ಇತರರು ಇದ್ದರು.