ಜನರಲ್ ತಿಮ್ಮಯ್ಯ ಜೀವನ ಪ್ರತಿಯೊಬ್ಬರಿಗೂ ಆದರ್ಶ: ವಿನಾಯಕ ನರ್ವಾಡೆ

| Published : Apr 01 2025, 12:45 AM IST

ಜನರಲ್ ತಿಮ್ಮಯ್ಯ ಜೀವನ ಪ್ರತಿಯೊಬ್ಬರಿಗೂ ಆದರ್ಶ: ವಿನಾಯಕ ನರ್ವಾಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರಲ್‌ ತಿಮ್ಮಯ್ಯ ಅವರ ಜೀವನಾದರ್ಶ ಪ್ರತಿಯೋರ್ವರಿಗೂ ಸದಾ ಆದರ್ಶಪ್ರಾಯವಾಗಿದೆ ಎಂದು ವಿನಾಯಕ ನರ್ವಾಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜನರಲ್ ತಿಮ್ಮಯ್ಯ ಅವರ ಜೀವನಾದರ್ಶ ಪ್ರತಿಯೋರ್ವರಿಗೂ ಸದಾ ಆದರ್ಶಪ್ರಾಯವಾಗಿದೆ. ನಾಯಕರು ಅನೇಕರು ಇದ್ದಾರಾದರೂ ಕೆಲವರು ಮಾತ್ರ ಸದಾ ನಮ್ಮ ಮನಸ್ಸಿನಲ್ಲಿ ಇರಲು ಸಾಧ್ಯ. ಇಂಥ ಮಹಾನ್ ಸೇನಾ ನಾಯಕರಾಗಿದ್ದವರು ಜನರಲ್ ತಿಮ್ಯಯ್ಯನವರು ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದ್ದಾರೆ.

ಕೊಡಗು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನಗರದ ಜನರಲ್ ತಿಮ್ಮಯ್ಯ ಜನ್ಮ ನಿವಾಸ ಸನ್ನಿಸೈಡ್ ನಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಿಮ್ಮಯ್ಯ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ವಿನಾಯಕ ನರ್ವಾಡೆ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ವಿನಾಯಕ ನರ್ವಾಡೆ, ಜನರಲ್ ತಿಮ್ಮಯ್ಯ ಅವರ ಜೀವನ ಪ್ರತೀಯೊಬ್ಬರಿಗೂ ಆದರ್ಶಪ್ರಾಯ. ಸೇನೆಯೇ ಅವರ ಆತ್ಮವಾಗಿತ್ತು ಹಾಗೇ ಆತ್ಮದಲ್ಲಿಯೇ ಸೇನಾ ಪ್ರೇಮ ಹುದುಗಿತ್ತು ಎಂದು ಸ್ಮರಿಸಿದರು. ಕೊಡಗಿನ ಜನತೆಗೆ ದೇಶಪ್ರೇಮದ ಮನೋಭಾವನೆ ಸಹಜವಾಗಿಯೇ ಹೆಚ್ಚಾಗಿದೆ. ಭವಿಷ್ಯದಲ್ಲಿ ಕೊಡಗಿನಿಂದ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳಿಗೆ ಯುವಪೀಳಿಗೆ ಸೇರ್ಪಡೆಯಾಗಬೇಕೆಂದೂ ಅವರು ಹಾರೈಸಿದರು.

ತಾನು ಮಹಾರಾಷ್ಟ್ರದಲ್ಲಿದ್ದಾಗ ಕೊಡಗಿಗೆ ಪ್ರವಾಸ ಬಂದಿದ್ದೆ. ಆಗ ಸೈನಿಕರ ನೆಲೆವೀಡಾದ ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ಸಲ್ಲಿಸಲು ಅವಕಾಶ ಸಿಕ್ಕಿದ್ದರೆ ಸೂಕ್ತವಿತ್ತು ಎಂದು ಮನಸ್ಸಿನಲ್ಲಿಯೇ ಬಯಸಿದ್ದೆ. ಅಂತೆಯೇ 6 ತಿಂಗಳ ಬಳಿಕ ಇದೇ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ಸಲ್ಲಿಸುವ ಭಾಗ್ಯ ಸಿಕ್ಕಿತು ಎಂದೂ ವಿನಾಯಕ ನರ್ವಾಡೆ ಹರ್ಷವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಜನರಲ್ ತಿಮ್ಮಯ್ಯ ಅವರ ಕಷ್ಟಕರ ಜೀವನ ಮತ್ತು ಸೇನೆಯಲ್ಲಿ ಅವರು ತೋರಿದ ಅಪ್ರತಿಮ ಪೌರುಷದ ಬಗ್ಗೆ ತಿಳುವಳಿಕೆ ನೀಡುವಂಥ ಪ್ರಯತ್ನವಾಗಬೇಕು ಎಂದರು.

ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನೂ ವಿದ್ಯಾರ್ಥಿಗಳು ಸ್ಮರಿಸಬೇಕೆಂದು ಕರೆ ನೀಡಿದ ಮಹೇಶ್ ನಾಚಯ್ಯ, ಫೀಲ್ಡ್ ಮಾರ್ಷಲ್ ಕಾಯ೯ಪ್ಪ, ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆಗೆ ಸರಿಸಾಟಿಯಾದ ಮತ್ತೋವ೯ರು ಜಗತ್ತಿನಲ್ಲಿಯೇ ಇಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ತಿಮ್ಮಯ್ಯ ಅವರ ಜೀವನ ಬೆಂಕಿಯಲ್ಲಿ ಬಿದ್ದಂತಿತ್ತು. ಆ ಕಷ್ಟಕರ ಜೀವನಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಇರಬೇಕು ಎಂದು ಅಭಿಪ್ರಾಯಪಟ್ಟ ಮಹೇಶ್‌ ನಾಚಯ್ಯ, ಜನರಲ್ ತಿಮ್ಮಯ್ಯ ಅವರ ಪರಿಶ್ರಮದಿಂದಾಗಿಯೇ ಭಾರತೀಯರಾದ ನಾವಿಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದರು.

ಪೂಜಾಕೋಣೆಯಲ್ಲಿ ದೇವರ ಫೋಟೋಗಳೊಂದಿಗೇ ಫೀಲ್ಡ್ ಮಾಷ೯ಲ್ ಕಾಯ೯ಪ್ಪ, ಜನರಲ್ ತಿಮ್ಮಯ್ಯ ಅವರ ಫೋಟೋಗಳನ್ನಿಟ್ಟು ನಿತ್ಯ ಪೂಜೆ ಮಾಡುವಷ್ಟು ಅಹ೯ತೆಯನ್ನು ಈ ಮಹಾನ್ ಸೇನಾನಿಗಳು ಪಡೆದಿದ್ದಾರೆ ಎಂದೂ ಮಹೇಶ್ ನಾಚಯ್ಯ ಹೇಳಿದರು. ಇಂಥ ಸೇನಾನಿಗಳನ್ನು ಸದಾ ಸ್ಮರಿಸುವುದೇ ಅವರಿಗೆ ನಾವು ಸಲ್ಲಿಸುವ ನೈಜ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಎ.ಎಸ್. ಶ್ರೀಷ ಇದೇ ಸಂದಭ೯ ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆಯ ಬಗ್ಗೆ ಹಲವಷ್ಟು ಮಾಹಿತಿಗಳೊಂದಿಗೆ ಮಾತನಾಡಿ, ಎಲ್ಲರ ಮೆಚ್ಚುಗೆ ಗಳಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಅರಮೇರಿ ಶಾಲಾ ವಿದ್ಯಾರ್ಥಿಗಳಾದ ಮಾನ್ವಿ ಮುತ್ತಪ್ಪ, ಪ್ಯಾರಿಸ ಅವರಿಂದ ನಾಡಗೀತೆ, ಕೊಡಗು ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನುಷ್ಕ ರವಿಶಂಕರ್, ಶ್ರೇಯ, ಕ್ಯಾತಿ ಪ್ರಶಾಂತ್, ಶಾರ್ವರಿ ರೈ ದೇಶಭಕ್ತಿಗೀತೆಗಳನ್ನು ಹಾಡಿದರು. ತಿಮ್ಮಯ್ಯ ಸ್ಮಾರಕ ಭವನದ ಸಿಬ್ಬಂದಿ ಪೊನ್ನುಕಂಡ ರಮ್ಯ ಮಾಚಯ್ಯ ಅವರು ದೇಶಭಕ್ತಿಗೀತೆಯನ್ನು ಹಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇ೯ಶಕ ಕುಮಾರ್ ಸ್ವಾಗತಿಸಿ, ವಂದಿಸಿದರು.

ಮಡಿಕೇರಿ ತಹಸೀಲ್ಡಾರ್ ಪ್ರವೀಣ್ ಕುಮಾರ್, ಪೊಲೀಸ್ ಗುಪ್ತದಳದ ವೃತ್ತ ನಿರೀಕ್ಷಕ ಮೇದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮಣಜೂರು ಮಂಜುನಾಥ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಂಜು, ಜಿಲ್ಲಾ ಗೌಡ್ಸ್ ಸಂಸ್ಥೆಯ ತರಬೇತಿ ವಿಭಾಗದ ಆಯುಕ್ತೆ ಹೆಚ್. ಮೈಥಿಲಿ ರಾವ್, ಕೊಡಗು ವಿದ್ಯಾಲಯದ ಸಂಗೀತ ಶಿಕ್ಷಕಿ ಪ್ರತಿಭಾ ಮಧುಕರ್, ಪತ್ರಕರ್ತರಾದ ಅನಿಲ್ ಎಚ್.ಟಿ., ಬೊಳ್ಳಜೀರ ಅಯ್ಯಪ್ಪ, ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ, ಸಾಹಿತಿ ಜಿ.ಟಿ, ರಾಘವೇಂದ್ರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.