ಸಾರಾಂಶ
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಮಬಲದ ಹೋರಾಟ । ಚುರುಕಾದ ರಾಜಕೀಯ ಚಟುವಟಿಕೆ
ಕನ್ನಡಪ್ರಭ ವಾರ್ತೆ ಕುಕನೂರುಪಟ್ಟಣ ಪಂಚಾಯಿತಿ ಚುನಾವಣೆ ನಡೆದು ೨ ವರ್ಷ ಪೂರ್ಣಗೊಂಡು ೩ನೇ ವರ್ಷ ಆರಂಭವಾಗಿದ್ದು, ಈಗ ಪಪಂಗೆ ಮೀಸಲು ಶ್ರಾವಣ ಸೋಮವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.
ಪಪಂಯಲ್ಲಿ ಒಟ್ಟು ೧೯ ವಾರ್ಡ್ ಇದ್ದು, ೧೯ ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ೧೦ ಜನ ಸದಸ್ಯರು, ಬಿಜೆಪಿ ಬೆಂಬಲಿತ ಸದಸ್ಯರಾಗಿ ೯ ಅಭ್ಯರ್ಥಿಗಳು ಆಯ್ಕೆಯಾದರು.ಕಾಂಗ್ರೆಸ್:ಪಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಬಂದಿರುವುದರಿಂದ ಕಾಂಗ್ರೆಸ್ ಪಕ್ಷದಿಂದ ೯ನೇ ವಾರ್ಡ್ ಸದಸ್ಯೆ ಲಲಿತಮ್ಮ ಯಡಿಯಾಪೂರ, ೧೮ನೇ ವಾರ್ಡ್ ಲೀಲಾವತಿ ಮುಧೋಳ ಅವರ ನಡುವೆ ಪೈಪೋಟಿ ನಡೆದಿದೆ. ಉಪಾಧ್ಯಕ್ಷ ಸ್ಥಾನ ಎಸ್ಸಿ ಆಗಿರುವುದರಿಂದ ೧ನೇ ವಾರ್ಡ್ ರಾಧಾ ದೊಡ್ಡಮನಿ, ೩ನೇ ವಾರ್ಡ್ ಪ್ರಶಾಂತ್ ಆರ್‌ಬೆರಳ್ಳಿನ್, ೧೧ನೇ ವಾರ್ಡ್ ಮಂಜುಳಾ ಕಲ್ಮನಿ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ.
ಬಿಜೆಪಿ:ಪಕ್ಷದಿಂದ ೫ನೇ ವಾರ್ಡ್‌ನ ಕವಿತಾ ಹೂಗಾರ, ೧೩ನೇ ವಾರ್ಡ್ ಲಕ್ಷ್ಮೀ ಸಬರದ್, ೧೫ನೇ ವಾರ್ಡ್ ಫಿರದೋಶಬೇಗಂ ಖಾಜಿ ಸಾಮಾನ್ಯ ವರ್ಗದಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಎಸ್ಸಿ ಉಪಾಧ್ಯಕ್ಷ ಸ್ಥಾನಕ್ಕಾಗಿ ೨ನೇ ವಾರ್ಡ್ ನೇತ್ರಾವತಿ ಮಾಲಗಿತ್ತಿ, ೧೯ನೇ ವಾರ್ಡ್ ಜಗನ್ನಾಥ ಭೂವಿ ಪೈಪೋಟಿ ನಡೆಸಲಿದ್ದಾರೆ.
ನಂಬರ್ ಗೇಮ್ ಆರಂಭ:ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ೧೦ ಸದಸ್ಯರು ಆಯ್ಕೆಯಾಗಿದ್ದು, ಅದರಲ್ಲಿ 12ನೇ ವಾರ್ಡಿನ ಸದಸ್ಯ ರಾಮಣ್ಣ ಬಂಕದಮನಿ 2024ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದ್ದರು, ಈಗ ಅವರು ಬಿಜೆಪಿ ಬೆಂಬಲ ಪಡೆದು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡುತ್ತಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಂಸದ, ಶಾಸಕರ ಮತ:ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಲಸೆ ಹೋದ ಸದಸ್ಯರನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಬೆಂಬಲಕ್ಕೆ 9 ಸ್ಥಾನ ಉಳಿಯುತ್ತದೆ. ಬಿಜೆಪಿ ಬೆಂಬಲಿತರು ಸಹ 10 ಜನ ಆಗುವುದರಿಂದ ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತ ಬೇಕೆಂದರೆ ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ಬಸವರಾಜ ರಾಯರೆಡ್ಡಿ ಮತ ಚಲಾಯಿಸಬಹುದು.