ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

| Published : Oct 01 2024, 01:20 AM IST

ಸಾರಾಂಶ

ಕೊಪ್ಪ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮೇಲ್ನೋಟಕ್ಕೆ ಕಾಣದ ಎಷ್ಟೋ ರೋಗ ಲಕ್ಷಣಗಳು ಪತ್ತೆಯಾಗಲಿವೆ. ಅವಕಾಶವಿದ್ದಾಗ ನಿರ್ಲಕ್ಷ್ಯವಹಿಸದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅತ್ತಿಕೊಡಿಗೆ ಗ್ರಾ.ಪಂ. ಅಧ್ಯಕ್ಷ ಎನ್.ಟಿ. ಗೋಪಾಲಕೃಷ್ಣ ಹೇಳಿದರು.

- ಬಿಳಾಲುಕೊಪ್ಪದಲ್ಲಿ ನೇತ್ರ ತಪಾಸಣಾ ಶಿಬಿರದಲ್ಲಿ ಗ್ರಾ.ಪಂ. ಅಧ್ಯಕ್ಷ ಎನ್.ಟಿ. ಗೋಪಾಲಕೃಷ್ಣ

ಕನ್ನಡಪ್ರಭ ವಾರ್ತೆ ಕೊಪ್ಪ

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮೇಲ್ನೋಟಕ್ಕೆ ಕಾಣದ ಎಷ್ಟೋ ರೋಗ ಲಕ್ಷಣಗಳು ಪತ್ತೆಯಾಗಲಿವೆ. ಅವಕಾಶವಿದ್ದಾಗ ನಿರ್ಲಕ್ಷ್ಯವಹಿಸದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅತ್ತಿಕೊಡಿಗೆ ಗ್ರಾ.ಪಂ. ಅಧ್ಯಕ್ಷ ಎನ್.ಟಿ. ಗೋಪಾಲಕೃಷ್ಣ ಹೇಳಿದರು. ಭಾನುವಾರ ಅತ್ತಿಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಬಿಳಾಲುಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ನೇತ್ರ ತಜ್ಞರಿಂದ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಳಾಲುಕೊಪ್ಪದಂತಹ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕೇಂದ್ರ, ಆಸ್ಪತ್ರೆಗಳು ವಿರಳವಾಗಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆಗೆ ಅನುಕೂಲವಾಗಲೆಂದು ಆರಂಭಿಕ ಹಂತದಲ್ಲಿ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಎಲ್ಲಾ ತರಹದ ರೋಗ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗುವುದು ಎಂದರು.ಮತ್ತೋರ್ವ ಆಯೋಜಕರಾದ ವೆಂಕಟಕೃಷ್ಣ ಹೆಬ್ಬಾರ್ ಮಾತನಾಡಿ, ಉಚಿತ ಶಿಬಿರ ಎಂದು ನಿರ್ಲಕ್ಷ್ಯವಹಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಶಿಬಿರದ ಸದುಪಯೋಗವನ್ನು ಪಡೆದುಕೊಂಡಾಗ ಮತ್ತಷ್ಟು ಶಿಬಿರಗಳನ್ನು ನಡೆಸಲು ಆಯೋಜಕರಲ್ಲಿ ಆಸಕ್ತಿ ಮೂಡುವುದು ಎಂದು ಹೇಳಿದರು.ಶಿಬಿರದಲ್ಲಿ 100ಕ್ಕಿಂತಲೂ ಹೆಚ್ಚು ಜನ ಉಚಿತವಾಗಿ ಮಧುಮೇಹ ಮತ್ತು ರಕ್ತದೊತ್ತಡ ಹಾಗೂ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆಯ ನೇತ್ರತಜ್ಞರ ತಂಡದಿಂದ ನೇತ್ರ ತಪಾಸಣೆ ನಡೆಯಿತು.

ಶಿಬಿರ ಆಯೋಜಕ ತಂಡದ ಸಂದೀಪ್ ಬಿಳಾಲುಕೊಪ್ಪ, ಬಿಳಾಲುಕೊಪ್ಪ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್ ಭಟ್, ಅತ್ತಿಕೊಡಿಗೆ ಗ್ರಾ.ಪಂ. ಮಾಜಿ ಸದಸ್ಯ ಪುಟ್ಟಯ್ಯ, ನವಚೈತ್ರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಹಮೀದ್ ಎಚ್.ಎಂ., ಉಪಾಧ್ಯಕ್ಷ ಸಂತೋಷ್ ಕುಲಾಸೋ ಹಾಗೂ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರ ತಂಡದೊಂದಿಗೆ ಸಿಬ್ಬಂದಿಗಳು ಇದ್ದರು.