ನೇರವಾಗಿ ಇ-ಖಾತೆ ಪಡೆಯಿರಿ: ಶೇಷಾದ್ರಿ

| Published : Jan 17 2025, 12:48 AM IST

ಸಾರಾಂಶ

ರಾಮನಗರ: ನಗರಸಭೆಯಲ್ಲಿ ಇ-ಖಾತೆ ವಿಚಾರವಾಗಿ ಸಾರ್ವಜನಿಕರಿಂದ ಸಾಕಷ್ಟು ಅಸಮಾಧಾನ ಮತ್ತು ದೂರುಗಳಿವೆ. ಇನ್ನು ಮುಂದೆ ಆಸ್ತಿ ಮಾಲೀಕರು ದಲ್ಲಾಳಿ(ಮಧ್ಯವರ್ತಿ)ಗಳ ಮೊರೆ ಹೋಗದೆ ನೇರವಾಗಿ ಅರ್ಜಿ ಸಲ್ಲಿಸಿ 45ದಿನದೊಳಗೆ ಇ - ಖಾತೆ ಪಡೆದುಕೊಳ್ಳುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮನವಿ ಮಾಡಿದರು.

ರಾಮನಗರ: ನಗರಸಭೆಯಲ್ಲಿ ಇ-ಖಾತೆ ವಿಚಾರವಾಗಿ ಸಾರ್ವಜನಿಕರಿಂದ ಸಾಕಷ್ಟು ಅಸಮಾಧಾನ ಮತ್ತು ದೂರುಗಳಿವೆ. ಇನ್ನು ಮುಂದೆ ಆಸ್ತಿ ಮಾಲೀಕರು ದಲ್ಲಾಳಿ(ಮಧ್ಯವರ್ತಿ)ಗಳ ಮೊರೆ ಹೋಗದೆ ನೇರವಾಗಿ ಅರ್ಜಿ ಸಲ್ಲಿಸಿ 45ದಿನದೊಳಗೆ ಇ - ಖಾತೆ ಪಡೆದುಕೊಳ್ಳುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಇ - ಖಾತೆ ನವೀಕರಣ, ಸೃಜನೆ ಹಾಗೂ ವರ್ಗಾವಣೆಗೆ ಕಾಲ ಮಿತಿ ನಿಗದಿಗೊಳಿಸಲಾಗಿದೆ. ಅಂದರೆ ಅರ್ಜಿ ಸಲ್ಲಿಸಿದ ದಿನದಿಂದ 5 ಕೆಲಸದ ದಿನಗಳಲ್ಲಿ ಇ-ಖಾತೆ ನವೀಕರಣ, 12 ಕೆಲಸದ ದಿನಗಳಲ್ಲಿ ಹೊಸ ಇ-ಖಾತೆ ಸೃಜನೆ, 45 ಕೆಲಸದ ದಿನಗಳೊಳಗೆ ಇ-ಖಾತಾ ವರ್ಗಾವಣೆಗೆ ಕಾಲಾವಧಿ ನಿಗಧಿಯಾಗಿದೆ. ಇಷ್ಟರೊಳಗೆ ಕೆಲಸ ಆಗದಿದ್ದರೆ ಸಾರ್ವಜನಿಕರು ನೇರವಾಗಿ ನನ್ನನ್ನು ಅಥವಾ ಆಯುಕ್ತರನ್ನು ಪ್ರಶ್ನಿಸಬಹುದು ಎಂದರು.

ನಾಗರೀಕರು ದಲ್ಲಾಳಿಗಳ ಮೊರೆ ಹೋಗದೆ ನೇರವಾಗಿ ತಮ್ಮ ಅರ್ಜಿಗಳನ್ನು ನಗರಸಭೆಗೆ ಕೊಡಬೇಕು. ನಿಗದಿತ ದಿನಗಳಲ್ಲಿ ಅರ್ಜಿ ವಿಲೇವಾರಿ ಆಗಲಿದೆ. ಇ-ಖಾತೆ ವಿಚಾರದಲ್ಲಿ ಕಾನೂನು ಬದ್ಧವಾಗಿ ಅಗತ್ಯವಿರುವ ದಾಖಲೆಗಳನ್ನು ಆಸ್ತಿ ಮಾಲೀಕರು ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳು ತಿಳುವಳಿಕೆ ನೀಡುವರು. ಅರ್ಜಿದಾರರು ಎಲ್ಲ ದಾಖಲೆಗಳನ್ನು ಒದಗಿಸಿದರೆ, ನಿಗದಿಯಾಗಿರುವ ಅವಧಿಯಲ್ಲಿ ಇ-ಖಾತೆಗಳು ಸಿಗಲಿವೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಹಂತ ಹಂತವಾಗಿ ಆಡಳಿತದಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲ ಹೆಜ್ಜೆಯಾಗಿ ಇ-ಖಾತೆಗಳ ವಿಚಾರದಲ್ಲಿ ಬಾಕಿ ಇದ್ದ 180 ಅರ್ಜಿಗಳ ಪೈಕಿ 150 ಇ-ಖಾತೆಗಳನ್ನು ವಿಲೆ ಮಾಡಲಾಗಿದೆ. ಬಾಕಿಯಿರುವ ಅರ್ಜಿಗಳ ಬಗ್ಗೆ ತಾವು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 7 ದಿನಗಳಲ್ಲಿ 180 ಅರ್ಜಿಗಳ ಪೈಕಿ 150 ಅರ್ಜಿಗಳು ವಿಲೇವಾರಿಯಾಗಿವೆ. ಉಳಿದ ಅರ್ಜಿಗಳು ಸೂಕ್ತ ದಾಖಲೆಗಳು ಒದಗಿಸಿದ ನಂತರ ವಿಲೇ ಮಾಡಲಾಗುವುದು ಎಂದು ಹೇಳಿದರು.

ನಗರಸಭೆಯಲ್ಲಿ ದಲ್ಲಾಳಿಗಳಿಗೆ ಸಿಗುವ ಗೌರವ ಸದಸ್ಯರು ಹಾಗೂ ನಾಗರಿಕರಿಗೆ ಸಿಗುತ್ತಿಲ್ಲ ಎಂಬ ಕೂಗಿತ್ತು. ನಾವು ಆಡಳಿತದಲ್ಲಿ ಸಾಕಷ್ಟು ಸುಧಾರಣೆ ತರುತ್ತೇವೆ. ಆಯುಕ್ತರು, ಸಿಬ್ಬಂದಿ ಮತ್ತು ಸದಸ್ಯರ ಸಹಕಾರದಲ್ಲಿ ಜನಸ್ನೇಹಿ ಆಡಳಿತ ನೀಡುವ ಜೊತೆಗೆ ನಾಗರೀಕರಿಗೆ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದೇವೆ.

ಇ-ಖಾತೆ ವಿಚಾರದಲ್ಲಿ ನಾಗರೀಕರಿಂದ ಅಸಮಾಧಾನ, ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ತಾವು, ಆಯುಕ್ತರು ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ಸಭೆ ನಡೆಸಿದ್ದೇನೆ. ಇದರ ಪರಿಣಾಮ ಇ - ಖಾತೆಯನ್ನು ಸರಳೀಕರಣಗೊಳಿಸುವ ಹೊಸ ಪ್ರಯತ್ನ ಆರಂಭವಾಗಿದೆ. ನಾಗರೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒತ್ತುವರಿ ತೆರವು:

ನಗರಸಭೆಯ ಹೆಸರಿನಲ್ಲಿ ಎಷ್ಟು ಆಸ್ತಿಗಳಿವೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ.ಶೇಷಾದ್ರಿ, ನಗರಸಭೆಯ ಹೆಸರಿನಲ್ಲಿ 93 ಆಸ್ತಿಗಳಿವೆ. ಈ ಆಸ್ತಿಗಳ ಒತ್ತುವರಿಯಾಗಿದ್ದು ಕಂಡು ಬಂದರೆ ಮುಲಾಜಿಲ್ಲದೆ ತೆರವು ಗೊಳಿಸಲಾಗುವುದು ಎಂದು ಉತ್ತರಿಸಿದರು.

ಆಯುಕ್ತ ಡಾ.ಜಯಣ್ಣ ಮಾತನಾಡಿ, ಕೈ ಬರಹದಲ್ಲಿದ್ದ ಆಸ್ತಿ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಇ-ಖಾತೆಗೆ ಸಂಬಂಧಿಸಿದಂತೆ ದಾಖಲೆಗಳು, ಅಳತೆಗಳು ಮುಖ್ಯ. ಇವೆಲ್ಲ ಸರಿಯಾಗಿದ್ದರೆ ಮಾತ್ರ ಆಸ್ತಿಗಳು ಗಣಕೀಕರಣವಾಗುತ್ತವೆ. ಇಲ್ಲದಿದ್ದರೆ ತೊಡಕಾಗುತ್ತದೆ ಎಂದು ತಿಳಿಸಿದರು.

ಕೈ ಬರಹದ ಖಾತೆಗಳನ್ನು ಗಣಕೀಕರಣ ಮಾಡಲು ಹಲವಾರು ಹಂತಗಳಿವೆ. ಆಸ್ತಿಗೆ ಮೊದಲು ಆಸ್ತಿ ಸಂಖ್ಯೆ ಸೃಜನೆಯಾಗಬೇಕು, ಇದಕ್ಕೂ ಮುನ್ನ ದಾಖಲೆಗಳು ಅಳತೆಗಳ ಪರಿಶೀಲನೆಯಾಗಬೇಕು. ಹೀಗಾಗಿ 12 ಕೆಲಸದ ದಿನಗಳ ಅವಶ್ಯಕತೆ ಇದೆ ಎಂದರು.

ಇ-ಖಾತೆ ವರ್ಗಾವಣೆ ಅಂದರೆ ಒಬ್ಬ ಮಾಲೀಕನಿಂದ ಹೊಸ ಮಾಲೀಕನಿಗೆ ವರ್ಗಾವಣೆ ಆಗಲು 45 ಕೆಲಸದ ದಿನಗಳ ಅಗತ್ಯವಿದೆ. ಖಾತೆ ವರ್ಗಾವಣೆಗೆ ನಾಗರೀಕರ ಆಕ್ಷೇಪಣೆಗೆ 30 ದಿನಗಳ ಕಾಲಾವಕಾಶ ನೀಡುವಂತೆ ಸರ್ಕಾರದ ಸೂಚನೆ ಇದೆ. ಹೀಗಾಗಿ 30 ದಿನಗಳ ನಂತರ 15 ದಿನದಲ್ಲಿ ವರ್ಗಾವಣೆಯಾಗಲಿದೆ. ತಾಂತ್ರಿಕ ಕಾರಣಗಳನ್ನು ಹೊರತು ಪಡಿಸಿ ಮತ್ಯಾವ ಕಾರಣಕ್ಕೂ ವಿಳಂಬವಾಗುವುದಿಲ್ಲ ಎಂದು ಹೇಳಿದರು.

ನಗರ ವ್ಯಾಪ್ತಿಯಲ್ಲಿ ಒಟ್ಟು 24,435 ಆಸ್ತಿಗಳಿವೆ. ಈ ಪೈಕಿ 12,371 ಆಸ್ತಿಗಳಿಗೆ ಇ-ಖಾತೆಗಳು ಸಿಕ್ಕಿವೆ. ಇ-ಖಾತೆ ನವೀಕರಣ ಮತ್ತು ಸೃಜನೆಗೆ ಸರ್ಕಾರಿ ಶುಲ್ಕ 125 ರು. ಆಸ್ತಿ ವರ್ಗಾವಣೆಗೆ ಆಸ್ತಿ ಮೌಲ್ಯದ ಶೇ 2ರಷ್ಟು ಶುಲ್ಕವನ್ನು ಪಾವತಿಸಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

1850 ಖಾತೆಗಳು ಅಕ್ರಮ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಈ ಖಾತೆಗಳ ವಿಚಾರದಲ್ಲಿ ಲೋಕಾಯುಕ್ತರಿಂದ ಬರುವ ಸೂಚನೆಗಳನ್ನು ಅನ್ವಯಿಸಿ ಕ್ರಮವಹಿಸಲಾಗುವುದು. ಅಲ್ಲಿಯವರೆಗೂ ಆ ಖಾತೆಗಳ ಸ್ಟೇಟಸ್ ಕಾಯ್ದುಕೊಳ್ಳಲಿವೆ ಎಂದು ಜಯಣ್ಣ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಇ-ಖಾತೆಗಳ ವಿಚಾರದಲ್ಲಿ ನಗರಸಭೆಗೆ ಸಲ್ಲಿಕೆಯಾಗಿದ್ದ 180 ಅರ್ಜಿಗಳ ಪೈಕಿ 150 ಇ-ಖಾತೆಗಳನ್ನು ನಗರಸಭೆಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಆರ್ಜಿದಾರರಿಗೆ ವಿತರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಪಾರ್ವತಮ್ಮ, ಮಂಜುನಾಥ್, ಸೋಮಶೇಖರ್, ಗೋವಿಂದ ರಾಜು, ಫಯಾಜ್, ಅಕ್ಲಿಂ, ಮುತ್ತುರಾಜು, ಪವಿತ್ರ, ವಿಜಯಕುಮಾರಿ, ಮೊಯಿನ್ ಖುರೇಷಿ, ಗ್ಯಾಬ್ರಿಯಲ್, ಗಿರಿಜಮ್ಮ, ಬೈರೇಗೌಡ, ನಾಗಮ್ಮ, ಬೋರೇಗೌಡ ಇತರರಿದ್ದರು.

16ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆಗೆ ಸಲ್ಲಿಸಿದ್ದ 180 ಅರ್ಜಿಗಳ ಪೈಕಿ 150 ಇ-ಖಾತೆಗಳನ್ನು ಅಧ್ಯಕ್ಷ ಕೆ.ಶೇಷಾದ್ರಿ, ಸದಸ್ಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಆಸ್ತಿ ಮಾಲೀಕರಿಗೆ ವಿತರಿಸಿದರು.