ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ: ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ

| Published : Feb 09 2024, 01:47 AM IST

ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ: ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಶೇ.೮೦ ಎಫ್‌ಐಡಿಯನ್ನು ಆನ್‌ಲೈನ್ ಮಾಡಿದ್ದು, ಸುಮಾರು ೫೫ ಸಾವಿರ ರೈತರ ಖಾತೆಗಳಿಗೆ ತಲಾ ₹೨ಸಾವಿರ ಜಮೆ ಮಾಡಲಾಗುವುದು. ೭೦ ಕೃಷಿ ಹೊಂಡಗಳು ಮಂಜೂರಾಗಿದ್ದು, ೬೧೦ ಆನ್‌ಲೈನ್ ಅರ್ಜಿಗಳು ಬಂದಿವೆ.

ಯಲಬುರ್ಗಾ: ಪ್ರತಿಯೊಂದು ಅಂಗನವಾಡಿ, ಶಾಲೆಗಳು, ಗ್ರಾಪಂಗಳಲ್ಲಿರುವ ಕುಡಿಯುವ ನೀರನ್ನು ಪರೀಕ್ಷಿಸಬೇಕು. ಬೇಸಿಗೆ ಪ್ರಾರಂಭಗೊಂಡಿದ್ದರಿಂದ ಮಕ್ಕಳಿಗೆ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆರೋಗ್ಯ ಇಲಾಖೆ, ಆರ್‌ಡಬ್ಲುಎಸ್ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬೇಸಿಗೆ ಕೂಡ ಪ್ರಾರಂಭವಾಗಲಿದೆ. ಕುಡಿಯುವ ನೀರನ ಅಭಾವ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.

ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಚಿತಾ ಬಡಿಗೇರ ಪ್ರತಿಕ್ರಿಮಿಸಿ, ಕುಡಿವ ನೀರಿನ ಅಂತಹ ಯಾವ ಪ್ರಕರಣಗಳು ಬಂದಿಲ್ಲ. ಬೇಸಿಗೆ ಹಿನ್ನೆಲೆಯಲ್ಲಿ ಕುಡಿವ ನೀರಿನ ಟೇಸ್ಟಿಂಗ್ ಮಾಡಿಸಲಾಗುವುದು ಎಂದು ಉತ್ತರಿಸಿದರು.

ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವಾಗ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಶಾಲಾ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವ ತೊಂದರೆಯಾಗದಂತೆ ಇನ್ನಿತರ ಸೌಲಭ್ಯಗಳನ್ನು ದೊರಕಿಸಿಕೊಡುವ ಕಾರ್ಯ ಮಾಡಿಕೊಡಬೇಕು ಎಂದು ಉಪಕಾಯದರ್ಶಿ ತೊದಲಬಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಖಡಕ್ ಸೂಚಿಸಿದರು.

ಕೃಷಿ ಅಧಿಕಾರಿ ಪ್ರಾಣೇಶ ಹಾದಿಮನಿ ಮಾತನಾಡಿ, ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಶೇ.೮೦ ಎಫ್‌ಐಡಿಯನ್ನು ಆನ್‌ಲೈನ್ ಮಾಡಿದ್ದು, ಸುಮಾರು ೫೫ ಸಾವಿರ ರೈತರ ಖಾತೆಗಳಿಗೆ ತಲಾ ₹೨ಸಾವಿರ ಜಮೆ ಮಾಡಲಾಗುವುದು. ೭೦ ಕೃಷಿ ಹೊಂಡಗಳು ಮಂಜೂರಾಗಿದ್ದು, ೬೧೦ ಆನ್‌ಲೈನ್ ಅರ್ಜಿಗಳು ಬಂದಿವೆ. ಅದರಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೃಷಿ ಹೊಂಡ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು. ಇನ್ನು ಈಗಾಗಲೇ ತಾಲೂಕಿನ ಬಹುತೇಕ ರೈತರಿಗೆ ಸ್ಪಿಂಕ್ಲರ್‌ಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಅಧಿಕಾರಿಗಳ ಗೈರು:

ಸಭೆಗೆ ತಾಲೂಕಿನಲ್ಲಿ ೩೨ ಇಲಾಖೆ ಪೈಕಿ ಕೇವಲ ಬೆರಣಿಕೆಯಷ್ಟು ಇಲಾಖೆ ಕೆಲ ಅಧಿಕಾರಿಗಳು ಬಂದಿದ್ದರೆ ಇನ್ನು ಕೆಲ ಅಧಿಕಾರಿಗಳ ಬದಲು ಸಿಬ್ಬಂದಿ ಯಾವುದೇ ಪ್ರಗತಿಯ ಮಾಹಿತಿ ತಾರದೇ ಕಾಟಾಚಾರಕ್ಕಾಗಿ ಹಾಜರಾಗಿದ್ದವರನ್ನು ಉಪಕಾರ್ಯದರ್ಶಿ, ಅಧಿಕಾರಿಗಳನ್ನೇ ಬರುವಂತೆ ಹೇಳಿ ಮರಳಿ ಕಳುಹಿಸಿದರು.

ಈ ಸಂದರ್ಭದಲ್ಲಿ ತಾಪಂ ಇಒ ಸಂತೋಷ ಪಾಟೀಲ, ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ, ತಾಲೂಕು ಅಧಿಕಾರಿಗಳಾದ ಬಿ.ಎಂ. ಮಾಳೆಕೊಪ್ಪ, ಲಿಂಗನಗೌಡ ಪಾಟೀಲ, ಶ್ರೀಧರ ತಳವಾರ, ಅನಿಲ್‌ಪಾಟೀಲ, ಶಿವಶಂಕರ ಕರಡಕಲ್, ಪ್ರಕಾಶ ಚೂರಿ, ಎಫ್.ಎಂ. ಕಳ್ಳಿ, ಅಜ್ಜಯ್ಯ ಮಠದ, ಶರಣಪ್ಪ ಕದಂಪುರ, ಮಹಾಂತೇಶ ಮಠದ, ಡಾ.ಶೇಖರ ಭಜಂತ್ರಿ, ಶರೀಫ್ ಕೊತ್ವಾಲ್, ಸಂಜಯ ಚಿತ್ರಗಾರ ಇದ್ದರು.