ಸಾರಾಂಶ
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತ ಪ್ರಜೆಗಳಾಗಿ ಈ ದೇಶದ ಶಕ್ತಿ ಮತ್ತು ಆಸ್ತಿಯಾಗಲಿ ಎಂದು ಜಾನಪದ ಕಲಾವಿದೆ ಗುರಮ್ಮ ಶಂಕೀನಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತ ಪ್ರಜೆಗಳಾಗಿ ಈ ದೇಶದ ಶಕ್ತಿ ಮತ್ತು ಆಸ್ತಿಯಾಗಲಿ ಎಂದು ಜಾನಪದ ಕಲಾವಿದೆ ಗುರಮ್ಮ ಶಂಕೀನಮಠ ಹೇಳಿದರು.ಬಸವೇಶ್ವರ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯಲ್ಲಿ 2024-25ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಚರಿತ್ರ್ಯ ಹಾಳು ಮಾಡಿಕೊಳ್ಳದೇ ಸಚಾರಿತ್ರ್ಯವಂತರಾಗಬೇಕು. ಹೆಣ್ಣು ಮಗಳು ದುಡಿದು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಬಲಳಾಗಬೇಕು. ಅಂದಾಗ ತನ್ನ ಕುಟುಂಬವನ್ನು ಸಂಬಾಳಿಸಲು ಸಾಧ್ಯವಾಗುತ್ತದೆ. ಕಲಿತವರೆಲ್ಲರೂ ಸರ್ಕಾರಿ ನೌಕರಿಗೆ ಆಸೆ ಮಾಡದೇ ಯಾವುದೇ ಉದ್ಯೋಗ ಮಾಡಲು ಸಿದ್ಧರಾಗಬೇಕು. ಇಂದಿನ ವಿದ್ಯಾರ್ಥಿನಿಯರು, ಯುವತಿಯರು ನೀವು ರೈತರನ್ನು ಮದುವೆಯಾಗಿ ಆ ಕುಟುಂಬಕ್ಕೆ ಗೌಡತಿಯಾಗಬೇಕೆಂದು ಸಲಹೆ ನೀಡಿದರು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ ಚವ್ಹಾಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ವಿಕಾಸ ಆಗಬೇಕು ವಿಕಾರವಾಗಬಾರದು. ಮಡಿವಾಳ ಮಾಚಿದೇವ ಹಾಗೂ ಇತರೆ ವಚನಕಾರರನ್ನು ಸ್ಮರಿಸಿಕೊಳ್ಳುತ್ತ ಅಂದಿನ ಅನುಭವ ಮಂಟಪದಲ್ಲಿರುವ ಶರಣರು ರಚಿಸಿದ ವಚನಗಳನ್ನು ತಿಳಿಸಿದರು.
ಪಿಯುಸಿ ವಿಭಾಗದ ಸಂಯೋಜಕಿ ಜಿ.ಎಸ್.ಶೆಲ್ಲಿಕೇರಿ ಸ್ವಾಗತಿಸಿದರು. ಎಸ್.ಆಯ್ ಪತ್ತಾರ್ ಮುಖ್ಯ ಅತಿಥಿಗಳು ಅಧ್ಯಕ್ಷರನ್ನು ಪರಿಚಯಿಸಿದರು. ಎಂ.ಎಂ.ಹುನುಗುಂದ ವಿವಿಧ ಘಟಕಗಳನ್ನು ಪರಿಚಯಿಸಿದರು. ಡಾ.ಎಸ್.ಎಸ್.ಕೋಟ್ಯಾಳ ಅವರು ಕ್ರೀಡೆಗಳ ಮಹತ್ವ ಕುರಿತು ಮಾತನಾಡಿದರು. ಪೂಜಾ ಕಾಂಬ್ಳೆ ವಂದಿಸಿದರು. ಎಸ್.ಎಸ್.ಪಾಟೀಲ್ ನಿರೂಪಿಸಿದರು.