ಸರ್ಕಾರ ಸೌಲಭ್ಯ ಪಡೆದು ಸಾಧನೆ ಮಾಡಿ

| Published : Jun 21 2024, 01:00 AM IST

ಸಾರಾಂಶ

ಕಲಾದಗಿ ಹತ್ತಿರದ ಖಜ್ಜಿಡೋಣಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಗ್ರಾಪಂ ವತಿಯಿಂದ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಸರ್ಕಾರ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡಲು ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡಿ ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಖಜ್ಜಿಡೋಣಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಚ್. ಮುಲ್ಲಾ ಹೇಳಿದರು.

ಗ್ರಾಮ ಪಂಚಾಯತಿಯಿಂದ ಖಜ್ಜಿಡೋಣಿಯಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟ, ಪೌಷ್ಟಿಕಯುಕ್ತ ರಾಗಿ ಮಾಲ್ಟ್, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಜೊತೆಗೆ ಗ್ರಾಪಂ ವತಿಯಿಂದ ಎಸ್ಸಿ, ಎಸ್ಟಿ ಮೀಸಲು ಅನುದಾನ ಹಾಗೂಗ್ರಾಪಂ ನಿಧಿ ೧ ರಲ್ಲಿನ ಹಣ ಬಳಕೆ ಮಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಶಾಲೆಯಲ್ಲಿಯೂ ಇನ್ನಿತರ ಕಲಿಕಾ ಉಪಕರಣಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಿ, ಜೀವನ ರೂಪಿಸಿಕೊಳ್ಳಬೇಕು ಎಂದರು.

ಖಜ್ಜಿಡೋಣಿ ಗ್ರಾಮ ಪಂಚಾಯತಿ ಎಸ್ಸಿ,ಎಸ್ಟಿ ಮೀಸಲು ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿನ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಪಂ ನಿಧಿ ೧ರಲ್ಲಿ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಖಜ್ಜಿಡೋಣಿ, ಉದಗಟ್ಟಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸ್ಕೂಲ್ ಬ್ಯಾಗ್‌ ವಿತರಣೆ ಮಾಡಲಾಯಿತು.

ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಮಾದರ, ಉಪಾಧ್ಯಕ್ಷೆ ಮಂಜುಳಾ ಕೆಂಜೋಡಿ, ಮಾಜಿ ಅಧ್ಯಕ್ಷ, ಸದಸ್ಯ ಗಿರೀಶ ತುಪ್ಪದ, ಸಿಬ್ಬಂದಿ ಯಮನಪ್ಪ ಬಸವನಾಯಕ್, ಸಂಜು ಪತ್ತಾರ, ಯಂಕಪ್ಪ ತಳವಾರ, ಪುಂಡಲೀಕ ವಾಲಿಕಾರ, ಹನಮಂತ ಹಡಪದ, ರಾಮಚಂದ್ರ ಕೊಪ್ಪದ ಇನ್ನಿತರರು ಇದ್ದರು.