ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೋಪ್ ಫಾರ್ ಹ್ಯೂಮ್ಯಾನಿಟಿ ವೆಲ್ಫೇರ್ ಟ್ರಸ್ಟ್ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಭಾನುವಾರ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ನೂರಾರು ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.ನಗರಸಭೆ ಸದಸ್ಯ ಅಮೀರ್ ಜಾನ್ ಮಾತನಾಡಿ, ಮನುಷ್ಯನಿಗೆ ಬಿಪಿ, ಷುಗರ್ ಹಾಗೂ ದೈಹಿಕ ಆರೋಗ್ಯ ಸ್ಥಿತಿ ಹೇಗಿದೆ ಎಂದು ತಿಳಿಯಬೇಕಾದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರ್ಷದಲ್ಲಿ ಒಂದು ಇಲ್ಲವೇ ಎರಡು ಬಾರಿ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಆರೋಗ್ಯವಂತರಾಗಿದ್ದರೆ ಸಮಾಜದಲ್ಲಿ ಏನಾದರೂ ಸಾಧಿಸಬಹುದು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಎಸ್.ಎಸ್. ಪಾಷಾ ಮಾತನಾಡಿ, ಒಂದು ಹಳೆ ಹಾಸನ ಭಾಗಕ್ಕೆ ಸರಿಯಾಗಿ ಸಾರಿಗೆ ಬಸ್ ಸೌಕರ್ಯವಿಲ್ಲ. ಗ್ರಂಥಾಲಯವಿಲ್ಲ. ಸರಿಯಾದ ಆಸ್ಪತ್ರೆ ಕೂಡ ಇಲ್ಲ. ಇದ್ದರೂ ನಾಮಕೇ ವಾಸ್ತೆ ಮಾತ್ರ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈಗಾಗಲೇ ತಿಳಿಸಲಾಗಿದೆ. ನಾನೂ ಕೂಡ ಇಲ್ಲಿಯೇ ಹುಟ್ಟಿ ಬೆಳೆದಿದ್ದು, ಇಲ್ಲಿನ ಜನರ ಕಷ್ಟಗಳನ್ನು ಕಂಡಿದ್ದೇನೆ. ಇಲ್ಲಿನ ಜನರಿಗೆ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಯಿಲೆ ಬಂದ ಮೇಲೆ ಔಷಧಿ ತೆಗೆದುಕೊಳ್ಳುತ್ತೇವೆ. ಆದರೆ ಕಾಯಿಲೆ ಬರುವುದಕ್ಕೆ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ. ಬೆಳಗಿನ ಸಮಯ ವಾಕ್ ಮಾಡಬೇಕು. ಯಾವಾಗಲೂ ವಾಹನದಲ್ಲೇ ನಾವು ಓಡಾಡುತ್ತಿದ್ದರೆ ನಾನಾ ಕಾಯಿಲೆಗಳು ಉದ್ಭವಿಸುತ್ತವೆ. ನಮ್ಮ ಜೀವನ ಶೈಲಿಯಲ್ಲಿ ಸಲ್ಪ ಬದಲಾವಣೆ ಮಾಡಿಕೊಂಡು ನಡೆಯುವ ಪ್ರವೃತ್ತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳುವಂತೆ ಸಲಹೆ ನೀಡಿದರು.ವೈದ್ಯರಾದ ನಾಯೀಮ್ ಸಿದ್ಧಿಕಿ ಮಾತನಾಡಿ, ಇಂತಹ ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ಅಗತ್ಯವಿದೆ. ಒಂದು ಸಾಮಾನ್ಯ ಚಿಕಿತ್ಸೆಗಾಗಿ ದೂರದ ಸ್ಥಳಗಳಿಗೆ ದುಂದು ವೆಚ್ಚ ಮಾಡಿಕೊಂಡು ಹೋಗಬೇಕಾಗಿದೆ. ಈ ಶಿಬಿರಕ್ಕೆ ನುರಿತ ವೈದ್ಯರು ಇದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್ ಪ್ರಾಸ್ತಾವಿಕ ನುಡಿಯಲ್ಲಿ , ರಕ್ತದ ಅವಶ್ಯಕತೆ ಇದ್ದಾಗ ಯಾವ ಜಾತಿ ಇರುವುದಿಲ್ಲ. ಒಟ್ಟಾರೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದು ಒಳ್ಳೆಯ ಉದ್ದೇಶ. ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದರೆ ನಮ್ಮ ದೇಹಕ್ಕೆ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಿಸುತ್ತದೆ. ದೈಹಿಕವಾಗಿ ಸದೃಢರಾಗಿರುತ್ತೇವೆ, ಈ ಉದ್ದೇಶದೊಂದಿಗೆ ಇಂತಹ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು. ಬೃಹತ್
ಶಿಬಿರದಲ್ಲಿ ಮೂಳೆ ತಜ್ಞರು, ನರರೋಗ ತಜ್ಞರು, ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು, ಹೃದ್ರೋಗ ತಜ್ಞರು ಹಾಗೂ ಉಚಿತ ಕನ್ನಡಕ ಸಹಿತವಾಗಿ ಈ ಮೇಲ್ಕಂಡ ಕಾಯಿಲೆಗಳ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ಹೋಪ್ ಫಾರ್ ಹ್ಯುಮ್ಯಾನಿಟಿ ಅಧ್ಯಕ್ಷರಾದ ಮುದಾಸಿರ್, ಹಫೀಜ್ ಹಿದಾಯ್ತುಲ್ಲ ಖಾನ್, ಇಂಡಿಯಾನಾ ಆಸ್ಪತ್ರೆಯ ಡಾ. ಆಫ್ರಿನ್ ತಾಜ್, ಇಂಡಿಯನ್ ಆಸ್ಪತ್ರೆ ಯ ಎಚ್.ಜಿ. ಭರತ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚನ್ನರಾಯಪಟ್ಟಣ ಚೇರ್ಮನ್ ಜಬಿ ಉಲ್ಲಬೇಗ್, ಕಾರ್ಯದರ್ಶಿ ಡಾ. ಕೃತಿ , ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನ ಡಾ.ಮಹೇಂದ್ರ, ಡಾ. ಶಶಾಂಕ್, ರಾಕೇಶ್ ನೇತ್ರಾಲಯದ ಪವನ್ ರಾಜ್ ರವರು ಉಪಸ್ಥಿತರಿದ್ದರು.