ಸರ್ಕಾರಿ ಸೌಲಭ್ಯಗಳ ಬಳಸಿ ಉನ್ನತ ಶಿಕ್ಷಣ ಗಳಿಸಿ

| Published : Oct 04 2024, 01:02 AM IST

ಸಾರಾಂಶ

ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ಕೋಟಿ ಕೋಟಿ ಅನುದಾನ ನೀಡುತ್ತಿದೆ. ತಾಲೂಕು ಕೇಂದ್ರದಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆದಿದೆ. ಹೆಣ್ಣುಮಕ್ಕಳು ಶಿಕ್ಷಣ ಮೊಟಕುಗೊಳಿಸದೇ, ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಅಂತರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಲ್ಲಿ ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ. ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ಕೋಟಿ ಕೋಟಿ ಅನುದಾನ ನೀಡುತ್ತಿದೆ. ತಾಲೂಕು ಕೇಂದ್ರದಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆದಿದೆ. ಹೆಣ್ಣುಮಕ್ಕಳು ಶಿಕ್ಷಣ ಮೊಟಕುಗೊಳಿಸದೇ, ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಬುಧವಾರ ಅಂತರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಅಂಗವಾಗಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಹೆಣ್ಣುಮಗುವಿನ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದಿಂದ ದೊರಕುವ ಸೌಲಭ್ಯಗಳ ಬಳಸಿ, ಹೆಣ್ಣುಮಕ್ಕಳು ಭವಿಷ್ಯದ ಜೀವನ ಕಟ್ಟಿಕೊಂಡು ತಮ್ಮ ಏಳ್ಗೆ ಕಂಡುಕೊಳ್ಳಬೇಕು. ಸಮಾಜದಲ್ಲಿ ಇತ್ತೀಚಿಗೆ ಹೆಣ್ಣುಮಕ್ಕಳ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದರು.

ಹೊನ್ನಾಳಿ ತಾಲೂಕಿಗೆ 2 ಸಾವಿರಕ್ಕೂ ಹೆಚ್ಚು ಬಡವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶಗಳಿಂದ ಹಾಗೂ ಪಕ್ಕದ ತಾಲೂಕುಗಳಿಂದ ಶಿಕ್ಷಣಕ್ಕಾಗಿ ಬರುತ್ತಿದ್ದು, ಇದಕ್ಕಾಗಿ ತಾಲೂಕಿನಲ್ಲಿ 23ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಸಿಡಿಪಿಒ ಎಸ್.ಎಸ್. ಜ್ಯೋತಿ ಮಾತನಾಡಿ, ಹೆಣ್ಣುಮಕ್ಕಳು ಅನೇಕ ಸಮಸ್ಯೆಗಳನ್ನು ಹೊಂದಿದ್ದು, ಇವುಗಳ ಪರಿಹಾರಕ್ಕೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅ.2, 2017ರಲ್ಲಿ ವಿಶ್ವಸಂಸ್ಥೆಯಿಂದ ಅಂತರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಘೋಷಿಸಲ್ಪಟ್ಟ ನಂತರ ಪ್ರತಿ ವರ್ಷ ದಿನಾಚರಣೆ ಅಂಗವಾಗಿ ಹೆಣ್ಣುಮಗುವಿನ ಸಂಬಂಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಸಂಚಾಲಕ ಡಾ.ಜಗದೀಶ್, ವಕೀಲ ಕರುಣಾಕರ್ ಮಾತನಾಡಿದರು.

ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮೃತ್ಯುಂಜಯ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಉಮಾ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ರೂಪ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶಾಲಿನ ಓಲೇಕರ್ ಸ್ವಾಗತಿಸಿ, ಅಂಜಲಿ ನಿರೂಪಿಸಿದರು. ಸುಚಿತ್ರ ವಂದಿಸಿದರು.

- - -

ಕೋಟ್‌ ವಿಶ್ವದಲ್ಲಿ ಅತ್ಯಂತ ಪ್ರಬುದ್ಧ ಮಹಿಳೆಯಾಗಿ ಇಂದಿರಾ ಗಾಂಧಿ ಹೊರಹೊಮ್ಮಿದ್ದಾರೆ. 11 ವರ್ಷ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ, ಅಬ್ಬಕ್ಕದೇವಿ ಸೇರಿದಂತೆ ಇತರ ವೀರಾಗ್ರಣಿ ಮಹಿಳೆಯರು ಇಂದಿನ ವಿದ್ಯಾರ್ಥಿನಿಯರಿಗೆ ಆದರ್ಶವಾಗಬೇಕು

- ಪಟ್ಟರಾಜಗೌಡ, ತಹಸೀಲ್ದಾರ್

- - --2ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಅಂತರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಹೆಣ್ಣುಮಗುವಿನ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.