ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ತಳಮಟ್ಟದಲ್ಲಿ ಪಕ್ಷ ಸಂಘಟನೆಯ ಜೊತೆಗೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವ ಮೂಲಕ ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.ಭಾನುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಯಳಂದೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಮರ್ಥವಾಗಿ ನಿಂತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಜನಮನ್ನಣೆ ಗಳಿಸಿದೆ. ಬಿಜೆಪಿ ಪಕ್ಷದವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ. ಆದರೆ ಯೋಜನೆಯ ಸಮಿತಿಗಳಿಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ನೇಮಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದಾರೆ. ಆದರೆ ದೇಶದ ಪ್ರಧಾನ ಮಂತ್ರಿಗಳೇ ಆರ್‌ಎಸ್‌ಎಸ್‌ನವರನ್ನು ತಮ್ಮ ಜಂಟಿ ಕಾರ್ಯದರ್ಶಿಗಳಾಗಿ ನೇಮಿಸಿಕೊಂಡಿರುವುದು ಅಸಂವಿಧಾನಿಕ ನಡೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಈ ಬಾರಿ ನಾನು ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದೇನೆ. ನಾನು ಎಲ್ಲರಿಗೂ ಕೂಡ ಕೆಲಸಗಳನ್ನು ಹಂಚಿದ್ದೇನೆ. ಇದರಲ್ಲಿ ಜಾತಿ, ಧರ್ಮದ ತಾರತಮ್ಯ ಮಾಡಿಲ್ಲ. ಎಲ್ಲರನ್ನೂ ಸಮಾನ ಮನಸ್ಸಿನಿಂದ ಕಾಣುವ ಗುಣ ನನ್ನದಾಗಿದೆ. ಮುಂಬರುವ ಜಿಪಂ, ತಾಪಂ, ನಗರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲೂ ಸಹ ನಾನು ಟಿಕೆಟ್ ನೀಡುವ ವಿಚಾರದಲ್ಲಿ ಇದೇ ಮಾನದಂಡವನ್ನು ಅನುಸರಿಸುತ್ತೇನೆ ಎಂದರು. ಜೊತೆಗೆ ಪದಾಧಿಕಾರಿಗಳು ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕೆಂದು ತಿಳಿಸಿದರು.ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ಯುವ ಕಾಂಗ್ರೆಸ್‌ಗೆ ಈ ಬಾರಿ ಆನ್‌ಲೈನ್‌ನಲ್ಲಿ ಮತದಾನವಾಗಿದ್ದು, ೫೭ ಲಕ್ಷ ಮಂದಿ ಮತದಾನ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ೬೨ ಸಾವಿರ ಮಂದಿ ಮತದಾನ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಪಕ್ಷದಲ್ಲಿ ಒಟ್ಟು ೨೮ ಮಂಚೂಣಿ ಘಟಕಗಳಿದ್ದು, ಯುವ ಕಾರ್ಯಕರ್ತರು ಮಾಹಿತಿಯನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವ ಬದಲು ನೇರವಾಗಿ ಇಲ್ಲವೆ ಫೋನ್ ಕರೆಗಳ ಮೂಲಕ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಯೋಗೇಂದ್ರ, ಸೈಯದ್ ಸೇರಿದಂತೆ ಅನೇಕರು ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆ ಹಾಗೂ ತಾಲೂಕು ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಸದಸ್ಯರಾದ ವೈ.ಜಿ. ರಂಗನಾಥ, ಬಿ.ರವಿ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ ಮುನವ್ವರ್ ಬೇಗ್, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬಿಳಿಗಿರಿ ರಂಗನಾಥ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಡಿ. ವಿಜನ್, ಚಾಮುಲ್ ನಿರ್ದೇಶಕ ಕಮರವಾಡಿ ಮುಖಂಡರಾದ ರೇವಣ್ಣ, ವಿಷ್ಣುಕುಮಾರ್, ವಡಗೆರೆದಾಸ್, ಕಂದಹಳ್ಳಿ ನಂಜುಂಡಸ್ವಾಮಿ, ಲೋಕೇಶ್, ಚೇತನ್ ದೊರೈರಾಜ್, ಶವಿಶಂಕರ್, ಮೋಹನ್ ರಘು, ಹುಸೇನ್, ಕೃಷ್ಣಾಪುರ ದೇವರಾಜು, ಗೀತಾ, ಭಾಗ್ಯಮ್ಮ, ಸುಮಿತ್ರ, ಚೇತನ್ ಸೇರಿದಂತೆ ಅನೇಕರು ಇದ್ದರು.