ಸಾರಾಂಶ
ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರವಿದೆ. ಸರ್ಕಾರದ ಕೆಟ್ಟ ನಡೆ, ಜನವಿರೋಧಿ ಧೋರಣೆಯ ಕುರಿತು ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರವಿದೆ. ಸರ್ಕಾರದ ಕೆಟ್ಟ ನಡೆ, ಜನವಿರೋಧಿ ಧೋರಣೆಯ ಕುರಿತು ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಯುವಕರು ಹೆಚ್ಚೆಚ್ಚು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕರೆ ನೀಡಿದರು.ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಿ, ಸಧ್ಯ ದೇಶದ ತುಂಬಾ ರಾಮ ಮಂದಿರ ಉದ್ಘಾಟನೆಯ ಸುಗಂಧ ಹರಡಿದೆ. ನಮ್ಮ ದೇವರ ಮಂದಿರ ನಾವು ಕಟ್ಟಿಸಿಕೊಳ್ಳಲು 500 ವರ್ಷ ಬೇಕಾಯಿತು. ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ. ಅವುಗಳನ್ನೆಲ್ಲಾ ಸಾಧಿಸಲು ನಾವು ಜಾತಿ, ಮತ ಭೇದ ಮರೆತು ಒಂದಾಗಿ ಹಿಂದುತ್ವ, ಹಿಂದು ಎನ್ನುವ ಒಂದೇ ಕಾರಣಕ್ಕಾಗಿ ಸಂಘಟಿತರಾಗಬೇಕು. ನಮ್ಮನ್ನು ಜಾತಿಗಳಲ್ಲಿ ಒಡೆಯಲು ಬರುವವರಿಂದ ದೂರವಿರಿ ಎಂದು ಎಚ್ಚರಿಸಿದ ಅವರು ವಿಜಯಪುರದಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಕ್ಕಾಗಿ ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗ ಗಾಣಗಾಪೂರಕ್ಕೆ ಭೇಟಿ ನೀಡಿದ್ದೇನೆ. ಇದು ಯಾವುದೇ ರಾಜಕೀಯ ಭೇಟಿ ಅಲ್ಲ. ಮನಶಾಂತಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ದತ್ತಾತ್ರೇಯರ ಬಳಿ ಪೂಜೆ ಸಲ್ಲಿಸಿ ಬೇಡಿಕೊಂಡಿದ್ದೇನೆ ಎಂದು ಗಾಣಗಾಪೂರ ಭೇಟಿಯ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶೋಕ ಬಗಲಿ, ಭೀಮರಾವ್ ಕಲಶೆಟ್ಟಿ, ಮಲ್ಲಿಕಾರ್ಜುನ ನಿಂಗದಳ್ಳಿ, ಅರ್ಚಕರಾದ ಪ್ರಖ್ಯಾತ ಪೂಜಾರಿ, ಪ್ರಿಯಾಂಕ್ ಪೂಜಾರಿ, ನಾಗೇಶ ಪೂಜಾರಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.