ಸಾರಾಂಶ
ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಅಧ್ಯಕ್ಷರಾದ ಹೆಗ್ಗಡೆಯವರು ಧಾರ್ಮಿಕ, ಅರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದರವರು. ಅನೇಕ ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕನಸು ಕಂಡು ಎಂಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದರು ಎಂದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿದ್ಯಾರ್ಥಿಗಳು ವಿಭಿನ್ನ ಸಂಸ್ಕಾರ, ಸಂಪ್ರದಾಯದ ಹಿನ್ನೆಲೆಯಿಂದ ಎಂಜಿನಿಯರಿಂಗ್ ಶಿಕ್ಷಣ ಕಲಿಯಲು ವಿವಿಧ ಕಡೆಗಳಿಂದ ಬಂದಿದ್ದು ಇದು ಅತ್ಯಂತ ಜವಾಬ್ದಾರಿಯುತ ವೃತ್ತಿಯ ಶಿಕ್ಷಣವಾಗಿದೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ವಿಶ್ವಮಾನವರಾಗುವ ಅವಕಾಶ ಕಲ್ಪಿಸುತ್ತದೆ. ಶಿಸ್ತು, ಪ್ರಾಮಾಣಿಕತೆಯಿಂದ ಏಕ ಮನಸ್ಕರಾಗಿ ಸಂಸ್ಕಾರದಿಂದ ಗುಣಮಟ್ಟದ ಶಿಕ್ಷಣದೊಂದಿಗೆ ಜೀವನಾನುಭವ ಪಡೆಯಿರಿ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭವಿಷ್ಯದ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿಗಳು ಹೆಚ್ಚು ಜವಾಬ್ದಾರಿಯಿಂದ ಇರಬೇಕು, ಎಲ್ಲರೊಡನೆ ಹೊಂದಿಕೊಳ್ಳುವ ಮತ್ತು ಮಾರ್ಗದರ್ಶನ ನೀಡುವ ಹಂತಕ್ಕೆ ಬೆಳೆಯಬೇಕು. ಶಿಕ್ಷಣದ ಜೊತೆ ಜೀವನಾನುಭವ ಪಡೆಯಬೇಕು ಮತ್ತು ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಬೆಳೆಸಬೇಕಾಗಿದೆ ಎಂದರು.
ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಅಧ್ಯಕ್ಷರಾದ ಹೆಗ್ಗಡೆಯವರು ಧಾರ್ಮಿಕ, ಅರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದರವರು. ಅನೇಕ ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕನಸು ಕಂಡು ಎಂಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದರು. 150ಕ್ಕೂ ಅಧಿಕ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬರುತ್ತಿದ್ದು ಇದು ಎಸ್‌ಡಿಎಂ ಶಿಕ್ಷಣದ ಗುಣಮಟ್ಟದಿಂದ ಸಾಧ್ಯವಾಗಿದೆ ಎಂದರು.ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸಂಯೋಜಕ ಡಾ. ರವೀಶ್ ಪಡುಮಲೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಸ್ವಾಗತಿಸಿದರು. ಸಂಯೋಜಕ ಡಾ. ರವೀಶ್ ಪಡುಮಲೆ ವಂದಿಸಿದರು. ಉಪನ್ಯಾಸಕರಾದ ವಿದ್ಯಾ ಕೆ. ಮತ್ತು ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.