ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಲ ಮಾಡಿ ಮದುವೆ ಮಾಡಬೇಡಿ, ಸರಳವಾಗಿ ಮದುವೆ ಆಗುವುದು ನಿಮ್ಮ ಜೀವನಕ್ಕೆ ನೆಮ್ಮದಿ ಸಿಗುತ್ತದೆ. ಸಾಲದಿಂದ ಮುಕ್ತವಾಗಿಯೇ ಮದುವೆ ಮಾಡಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸಾರ್ವಜನಿಕರಿಗೆ ಸಲಹೆ ನೀಡಿದರು.ತಾಲೂಕಿನ ಹೆಬ್ಬಾಳು ವಿರಕ್ತಮಠದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿ, ಯಾರೂ ಸಾಲ ಮಾಡಿ ಮದುವೆ ಮಾಡಬೇಡಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಮೆಟ್ಟಿ, ತಲುಪಲು ಸಾಧ್ಯವಾಗುವ ರೀತಿಯಲ್ಲಿ ಸರಳ ವಿವಾಹವನ್ನು ಆಯ್ಕೆ ಮಾಡುವುದು ಅತ್ಯುತ್ತಮವಾಗಿದೆ ಎಂದು ಹೇಳಿದರು.
ಮನೆ ಖರೀದಿ, ಮದುವೆ, ಇತ್ಯಾದಿ ಕಾರ್ಯಗಳನ್ನು ಹಣಕಾಸು ಬಾಧ್ಯತೆಗಳಿಗೆ ಒಳಪಟ್ಟಂತೆ ಮಾಡುವುದು ದೊಡ್ಡ ನಷ್ಟವನ್ನು ತರುತ್ತದೆ, ಇದು ನಿಮ್ಮ ಜೀವನದ ಮುಂದೆ ಅನೇಕ ಸಮಸ್ಯೆಗಳನ್ನುಂಟು ಮಾಡಬಹುದು. ತಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ಸರಳ ವಿವಾಹ ಮಾಡಬೇಕೆಂದರು.ನಮ್ಮ ಮುಂದಿನ ಜೀವನ ಸುಗಮವಾಗಬೇಕಾದರೆ, ಮೊದಲಿಗೆ ನಾವು ಸಾಲದಿಂದ ಮುಕ್ತರಾಗಬೇಕು. ಸಾಲದಿಂದ ಮುಕ್ತನಾಗಿದ್ರೆ, ವ್ಯಕ್ತಿ ನೆಮ್ಮದಿಯಿಂದ ಬದುಕಬಹುದು ಎಂದು ತಿಳಿಸಿದರು.
ನೀವು ಎಷ್ಟು ದುಬಾರಿ ಮದುವೆ ಮಾಡಿದರೂ, ಅದು ಬದ್ಧತೆ ಹಾಗೂ ಆರ್ಥಿಕ ಬಾಧ್ಯತೆಗಳನ್ನು ತಂದೇ ಬಿಡುತ್ತದೆ. ನಿಮ್ಮ ಪಕ್ಕದ ಮನೆಯವರು ಮದುವೆ ಮಾಡಿದ ರೀತಿ, ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲು ಹೋಗಬೇಡಿ, ಇದು ಕುಟುಂಬವನ್ನು ಆರ್ಥಿಕವಾಗಿ ಹಾನಿಗೊಳಿಸುತ್ತದೆ ಎಂದು ಎಚ್ಚರಿಸಿದರು.
ಮದುವೆ ಮಾಡಿ ಸಾಲ ತೀರಿಸಲು ಕಷ್ಟಪಡೋದು ಬೇಡ. ಈ ರೀತಿ ಹಮ್ಮಿಕೊಳ್ಳುವ ಸಾಮೂಹಿಕ ವಿವಾಹಗಳಲ್ಲಿ ಸರಳವಾಗಿ ಮದುವೆ ಆಗಿ, ಆರ್ಥಿಕವಾಗಿ ಉಳಿತಾಯ ಮಾಡಿ, ಉಳಿದ ಹಣವನ್ನು ಬೇರೆ ಉಪಯುಕ್ತ ಕಾರ್ಯಗಳಿಗೆ ಬಳಸಿ. ಸಾಲ ಇಲ್ಲದ ಜೀವನವೇ ನೆಮ್ಮದಿಯ ಜೀವನ ಎಂದು ಕಿವಿಮಾತು ಹೇಳಿದರು.
ಬಸವಣ್ಣನವರು ತುಳಿತಕ್ಕೊಳಗಾದವರನ್ನು, ಅಸಹಾಯಕರು ಮತ್ತು ಸಮಾಜದ ಕಟ್ಟಕಡೆಯ ಜನರನ್ನು ಮೇಲೆತ್ತಿ, ಅವರಿಗೆ ಬದುಕಿನ ದಾರಿ ತೋರಿಸುವ ಮೂಲಕ ವಿಶ್ವ ಗುರು ಎನಿಸಿಕೊಂಡರು ಎಂದು ಬಣ್ಣಿಸಿದರು.ಸಾನ್ನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿವೆ. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಜೀವನಕ್ಕೆ ಪ್ರೋತ್ಸಾಹ ನೀಡುತ್ತವೆ. ಪ್ರತಿವರ್ಷ ಬಸವಣ್ಣನವರ ಜಯಂತಿ ಅಂಗವಾಗಿ ನಾವು ಉಚಿತ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ನೂತನ ದಂಪತಿಗಳು ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆಚಾರ-ವಿಚಾರ ಹಾಗೂ ಒಳ್ಳೆಯ ಸಂಸ್ಕಾರ ಕೊಟ್ಟು ದೇಶದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ 14 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮಹಾರುದ್ರಯ್ಯ, ನರೇಂದ್ರಬಾಬು, ಎಚ್.ಸಿ.ರುದ್ರಮುನಿ ಸೇರಿ ಗ್ರಾಮಸ್ಥರು ಭಾಗವಹಿಸಿದ್ದರು.
ಬಸವಣ್ಣನವರು ಅಜ್ಞಾನದ ಕತ್ತಲಲ್ಲಿರುವವರಿಗೆ ಜ್ಞಾನದ ಬೆಳಕು ನೀಡಿ, ಭಕ್ತಿ ಮತ್ತು ವಚನಗಳ ಮೂಲಕ ಮೌಲ್ಯಗಳ ಹಾದಿಯಲ್ಲಿ ನಡೆಸಿ ಮಾನವತಾವಾದವನ್ನು ಎತ್ತಿ ಹಿಡಿದವರು. ಜಾತಿ ಪದ್ಧತಿ ವಿರೋಧಿಸಿ, ಕಾಯಕವೇ ಕೈಲಾಸ ಎಂದು ಸಾರಿ, ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತಂದವರು.ಕೆ.ಎಸ್.ಬಸವಂತಪ್ಪ ಶಾಸಕ, ಮಾಯಕೊಂಡ.