ಸಾರಾಂಶ
ಗದಗ: ಬಡಮಹಿಳೆ ಮತ್ತು ಮಕ್ಕಳಿಗೆ ವೈದ್ಯಕೀಯ ಸೇವೆ ತ್ವರಿತಗತಿಯಲ್ಲಿ ದೊರಕಬೇಕು. ಅವರು ಚಿಕಿತ್ಸೆಯಿಂದ ವಂಚಿತರಾಗಬಾರದು ಎಂದು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ನಗರದ ದುಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ದುಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕುಂದು ಕೊರತೆ ಸಭೆ ಜರುಗಿಸಿ ಮಾತನಾಡಿದರು.ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಭೂತ ಸೌಲಭ್ಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯ ಒಳಗಡೆ ಹಾಗೂ ಹೊರಗಡೆ ಆವರಣ ಸ್ವಚ್ಛತೆಯಿಂದ ಕೂಡಿರುವಂತೆ ಕ್ರಮ ವಹಿಸಬೇಕು. ಆಸ್ಪತ್ರೆಗೆ ಬಂದ ರೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದರು. ನಂತರ ಆಸ್ಪತ್ರೆಯಲ್ಲಿನ ದಾಖಲಾದ ರೋಗಿ ಹಾಗೂ ಅವರ ಸಂಬಂಧಿಗಳೊಂದಿಗೆ ಮಾತನಾಡಿ ಮೂಲಭೂತ ಸೌಕರ್ಯಗಳು ಒದಗುತ್ತಿರುವ ಕುರಿತು ಹಾಗೂ ಕುಂದು ಕೊರತೆಗಳನ್ನು ಆಲಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸವನಗೌಡ ಕರಿಗೌಡರ ಮಾತನಾಡಿ, ಪ್ರತಿದಿನ 80ರಿಂದ 100 ಒಪಿಡಿ ಹೊರರೋಗಿಗಳ ವಿಭಾಗದಲ್ಲಿ ಬಾಣಂತಿಯರು ಹಾಗೂ ಸ್ತ್ರೀ ರೋಗಿಗಳು ಚಿಕಿತ್ಸೆ ಸೇವೆಯನ್ನು ಪಡೆಯುತ್ತಾರೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆ 200ರಿಂದ 300 ಸೇವೆಯನ್ನು ಪಡೆಯುತ್ತಾರೆ. ಒಂದು ವರ್ಷದಲ್ಲಿ ಒಟ್ಟು 500 ರಿಂದ 600ರ ವರೆಗೆ ಹೆರಿಗೆ ಚಿಕಿತ್ಸೆ ಮಾಡಲಾಗುತ್ತಿದೆ.ಜಿಲ್ಲಾ ಕೇಂದ್ರದಲ್ಲಿ ಹೆರಿಗೆ ಆಸ್ಪತ್ರೆಗೆ ಬರುವ ಹೆರಿಗೆ ಗರ್ಭಿಣಿ ತಾಯಂದಿರು ಸಹಜ ಹೆರಿಗೆಯು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆಯುತ್ತವೆ. ಮತ್ತು ಸಹಜವಾಗಿ ಹೆರಿಗೆ ಆಗದೆ ಇರುವ ಗರ್ಭಿಣಿ ತಾಯಂದಿರಿಗೆ ಗದಗ್ ಕೇಂದ್ರ ಸ್ಥಾನದಲ್ಲಿರುವ ಮಾನ್ವಿ ದುಂಡಪ್ಪ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. 4:30 ಗಂಟೆಯ ನಂತರದ ಅವಧಿಯಲ್ಲಿ ಸಾಯಂಕಾಲ ಅರವಳಿಕೆ ತಜ್ಞರು ಇಲ್ಲದೆ ಇರುವ ಕಾರಣ, ಕೆ.ಎಚ್. ಪಾಟೀಲ್ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ಚಿಕಿತ್ಸೆಗೆ ಹೋಗುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು.
ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್. ನೀಲಗುಂದ ಅವರು ಆಸ್ಪತ್ರೆಗಳಲ್ಲಿನ ಕುಂದುಕೊರತೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಜಿಪಂ ಸಿಇಒ ಭರತ್ ಎಸ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್., ಮಕ್ಕಳ ತಜ್ಞರು ಸ್ತ್ರೀ ರೋಗ ತಜ್ಞರು, ವೈದ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.