ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಿ

| Published : Mar 01 2024, 02:16 AM IST

ಸಾರಾಂಶ

ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮೂಲಕ ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಿ ಎಂದು ರೈತ ಮುಖಂಡ ಹೊನ್ನೂರ್ ಪ್ರಕಾಶ್ ಹೇಳಿದರು

ಹೊನ್ನೂರು ಪ್ರಕಾಶ್‌ ಕರೆ । ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹನೂರು ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮೂಲಕ ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಿ ಎಂದು ರೈತ ಮುಖಂಡ ಹೊನ್ನೂರ್ ಪ್ರಕಾಶ್ ಹೇಳಿದರು. ತಾಲೂಕಿನ ಬೂದುಗುಪ್ಪೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು. ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರು ಬೂದುಗುಪ್ಪೆ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿಲ್ಲ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಿರುವ ಗ್ರಾಮಕ್ಕೆ ಅಂಗನವಾಡಿ ಕೇಂದ್ರ ಬೇಕಾಗಿದೆ. ಜೊತೆಗೆ ಇಲ್ಲಿನ ನಿವಾಸಿಗಳು ಪಡಿತರ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು 3 ಕಿ.ಮೀ ದೂರದಲ್ಲಿರುವ ಗಾಂಧಿನಗರಕ್ಕೆ ಹೋಗಬೇಕಾಗಿದೆ ಎಂದರು.ಇಲ್ಲಿನ ರೈತರು ಅರಣ್ಯದಂಚಿನಲ್ಲಿ ಇರುವುದರಿಂದ ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಕ್ರಮ ಕೈಗೊಳ್ಳುವ ಬದಲು ರೈತರಿಗೆ ಕಿರುಕುಳ ಹಾಗೂ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಿದ್ಯುತ್ ಸಮಸ್ಯೆ ನಿರಂತರ ಜ್ಯೋತಿ ಕಾಮಗಾರಿ ಪೂರ್ಣಗೊಂಡಿದ್ದರು ಸಹ ಸಂಪರ್ಕ ನೀಡದ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಗ್ರಾಮದ ಜನತೆ ಕಗ್ಗತ್ತಲ್ಲಿನಲ್ಲಿ ಕಾಲ ಕಳೆಯುವಂತಾಗಿದೆ. ಜಮೀನುಗಳಿಗೆ ನೀಡುವ ವಿದ್ಯುತ್ ಸಂಪರ್ಕಗಳಿಂದ ಗ್ರಾಮದ ವಿದ್ಯುತ್ ನೀಡಲಾಗುತ್ತಿದೆ ನಿಲುಗಡೆ ಸಮಯದಲ್ಲಿ ಕಗ್ಗತ್ತಲು ಆವರಿಸುತ್ತದೆ ನಿರಂತರ ಜ್ಯೋತಿ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಬೇಕಾಗಿದೆ ಎಂದರು. ಹತ್ತಾರು ಸಮಸ್ಯೆಗಳಿರುವ ಈ ಗ್ರಾಮದಲ್ಲಿ ಬಸ್ಸಿನ ಸೌಲಭ್ಯವು ಸಹ ಇಲ್ಲದೆ ತುರ್ತು ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗಳು ಕಷ್ಟಕರವಾಗಿ ಹೋಗಿ ಬರಬೇಕಾಗಿದೆ ಇಂತಹ ಸಮಸ್ಯೆಗಳನ್ನು ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆ ಮೂಲಕ ಈ ಗ್ರಾಮದಲ್ಲಿ ನೂತನವಾಗಿ ತೆರೆಯಲಾಗಿರುವ ಗ್ರಾಮ ಘಟಕದ ಪದಾಧಿಕಾರಿಗಳು ಮೂಲಭೂತ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡುವ ಮೂಲಕ ಅಧಿಕಾರಿಗಳನ್ನು ಗ್ರಾಮಕ್ಕೆ ಬರುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಬೂದಗುಪ್ಪೆ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿಂದ ಇಲ್ಲಿನ ನಿವಾಸಿಗಳು ಮತ್ತು ರೈತರು ಪರದಾಡುವ ಉಂಟಾಗಿದೆ ರೈತ ಸಂಘಟನೆಯಿಂದ ಜನಪ್ರತಿನಿಧಿ ಅಧಿಕಾರಿಗಳ ಬಳಿ ಸಮಸ್ಯೆಗಳನ್ನು ಹೇಳುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರಿಗಳು ಸ್ಪಂದಿಸದಿದ್ದರೆ ರೈತ ಸಂಘಟನೆಯಿಂದ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಿ ಎಂದು ಸಲಹೆ ನೀಡಿದರು.