ಮೂಢ ನಂಬಿಕೆ ಬೇರು ಸಮೇತ ಕಿತ್ತು ಹಾಕಲು ಸಂಘಟಿತರಾಗಿ

| Published : Mar 09 2024, 01:37 AM IST

ಸಾರಾಂಶ

ಸಮಾಜದಲ್ಲಿ ಮೂಢನಂಬಿಕೆ ಹಾಸುಹೊಕ್ಕಾಗಿರುವುದರಿಂದ ದೇವದಾಸಿಯಂತಹ ಪದ್ಧತಿ ಇನ್ನೂ ಜೀವಂತವಿದೆ. ಅದನ್ನು ಬೇರು ಸಮೇತ ಕಿತ್ತು ಹಾಕಲು ಮೊದಲು ಸಂಘಟಿತರಾಗಬೇಕು ಎಂದು ಮೂಡಲಗಿಯ ಅಮ್ಮ ಸಂಸ್ಥೆಯ ಸಂಸ್ಥಾಪಕಿ ಶೋಭಾ ಗಸ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮಾಜದಲ್ಲಿ ಮೂಢನಂಬಿಕೆ ಹಾಸುಹೊಕ್ಕಾಗಿರುವುದರಿಂದ ದೇವದಾಸಿಯಂತಹ ಪದ್ಧತಿ ಇನ್ನೂ ಜೀವಂತವಿದೆ. ಅದನ್ನು ಬೇರು ಸಮೇತ ಕಿತ್ತು ಹಾಕಲು ಮೊದಲು ಸಂಘಟಿತರಾಗಬೇಕು ಎಂದು ಮೂಡಲಗಿಯ ಅಮ್ಮ ಸಂಸ್ಥೆಯ ಸಂಸ್ಥಾಪಕಿ ಶೋಭಾ ಗಸ್ತಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಸ್ವ ಶಕ್ತಿ ಮಹಿಳಾ ಸಬಲೀಕರಣ ಘಟಕವು ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ನಂಬಿಕೆಗಳನ್ನು ವಿರೋಧಿಸುವ ಗುಣಗಳನ್ನು ಬೆಳೆಸಿಕೊಂಡು ತನ್ನದೇ ಆದ ಮಾರ್ಗವನ್ನು ಕಂಡುಕೊಳ್ಳಬೇಕು. ಸಮಾಜದ ಮೇಲೆ ಪರಿಣಾಮ ಬೀರುವ ಮೂಢನಂಬಿಕೆಗಳಿಗೆ ಜೋತು ಬೀಳದೇ ಸುಶಿಕ್ಷಿತರಾಗಬೇಕು ಎಂದು ಕರೆ ನೀಡಿದರು.

6ನೇ ತರಗತಿಯಲ್ಲಿ ಓದುತ್ತಿರುವಾಗಲೇ ದೇವರ ಹೆಸರಿನಲ್ಲಿ ಮುತ್ತು ಕಟ್ಟಿ ಅವರನ್ನು ಅಂಧಕಾರಕ್ಕೆ ತಳ್ಳಿರುವ ದುಃಖವನ್ನು ತೋಡಿಕೊಂಡರು. 1997 ರಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಪ್ರಾರಂಭಿಸಿ, ಕರ್ನಾಟಕದಾದ್ಯಂತ 360 ಹಳ್ಳಿಗಳಿಂದ 3600 ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಲಾಗಿದೆ. 200ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಒಂದೇ ವರ್ಷದಲ್ಲಿ ಮರಳಿ ಶಾಲೆಗೆ ಕಳುಹಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ಪಂಖ ಇಂಡಿಯಾ ಫೌಂಡೇಶನ್ ಹಾಗೂ ಪಂಖ ಹ್ಯಾಂಡಿಕ್ರಾಫ್ಟನ್‌ ಸಿಇಒ ಗೌರಿ ಮಾಂಜರೇಕರ ಮಾತನಾಡಿ, ಸಮಾಜದಲ್ಲಿ ಲಿಂಗ ಸಮಾನತೆ ಬರಬೇಕು. ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದಾಗ ಮಹಿಳೆ ಸಬಲಳಾಗುತ್ತಾಳೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡದೇ ಅರ್ಧಕ್ಕೆ ಮೊಟಕುಗೊಳಿಸಲಾಗುತ್ತಿದೆ. ಆದ್ದರಿಂದ ಗ್ರಾಮೀಣ ಸ್ತ್ರೀಯರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದ ಜತೆಗೆ ಅವರಿಗೆ ವೃತ್ತಿಪರ ತರಬೇತಿ ನೀಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಪ್ರಭಾವಶಾಲಿಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಲಿಂಗಬೇಧ ತಾರತಮ್ಯ ಅಧಿಕಗೊಳ್ಳುತ್ತಿದೆ. ಅದು ತಪ್ಪಬೇಕಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಹೆಣ್ಣು ಮನೆಯ ಬೆಳಕು ಎಂಬುವುದನ್ನು ಅರಿತುಕೊಳ್ಳಬೇಕು. ಸ್ತ್ರೀ ಇಲ್ಲದ ಸಮಾಜವನ್ನು ಊಹಿಸಿಕೊಳ್ಳುವದು ಅಸಾಧ್ಯ. ಪಂಖ ಮೂಲಕ ಕರಕುಶಲ ವೃತ್ತಿಪರ ತರಬೇತಿಯನ್ನು ನೀಡಿ ವಿಭಿನ್ನವಾಗಿ ಯೋಚಿಸುವ ಕಾರ್ಯವಿಧಾನಗಳನ್ನು ತಿಳಿಸಿಕೊಡಲಾಗುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸ್ತ್ರೀ ಶಕ್ತಿ ಸಂಘದ ಉಪಾಧ್ಯಕ್ಷೆ ಡಾ.ಅಲ್ಯಾ ಕಾಳೆ ಅವರು ವಹಿಸಿದ್ದರು. ಸಮಾರಂಭದಲ್ಲಿ ಡಾ. ಆರತಿ ಮಹಿಶ್ಯಾಳೆ, ಡಾ. ಹರಪ್ರೀತ ಕೌರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.