ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ- ಶಾಸಕ ರಾಘವೇಂದ್ರ ಹಿಟ್ನಾಳ

| Published : Jan 04 2024, 01:45 AM IST

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ- ಶಾಸಕ ರಾಘವೇಂದ್ರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರೋತ್ಸವ ಹಿನ್ನೆಲೆಯಲ್ಲಿ ಜ.13ರಿಂದಲೇ ಗವಿಮಠಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಲಿದೆ. ರಥೋತ್ಸವ ದಿನದಿಂದ ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಶ್ರೀಮಠದ ಆವರಣದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಈ ಬಾರಿ ಬಸ್ಸಿನ ಸೌಕರ್ಯ ಇರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ.

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಈ ವರ್ಷ ಪ್ರತಿ ವರ್ಷಕ್ಕಿಂತಲೂ ಅಧಿಕ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳುವಂತೆ ಶಾಸಕ ರಾಘವೇಂದ್ರ ಸೂಚಿಸಿದ್ದಾರೆ.ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಾತ್ರೋತ್ಸವ ಹಿನ್ನೆಲೆಯಲ್ಲಿ ಜ.13ರಿಂದಲೇ ಗವಿಮಠಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಲಿದೆ. ರಥೋತ್ಸವ ದಿನದಿಂದ ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಶ್ರೀಮಠದ ಆವರಣದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಈ ಬಾರಿ ಬಸ್ಸಿನ ಸೌಕರ್ಯ ಇರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ. ಶ್ರೀಮಠಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ವಿವಿಧೆಡೆ ಅಚ್ಚುಕಟ್ಟಾಗಿ ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದರು.ಜಾತ್ರೋತ್ಸವ ದಿನದಂದು ಶ್ರೀಮಠದ ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಆ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಠದ ಆವರಣದ ನಾಲ್ಕೂ ದಿನಕ್ಕಿನಲ್ಲಿ ಅಗ್ನಿಶಾಮಕ ವಾಹನಗಳು ಇರಬೇಕು ಎಂದು ತಿಳಿಸಿದರು.ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಂಚರಿಸಲು ಅನುಕೂಲವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಜ.10ರಿಂದ ಫೆ.10ರವರೆಗೆ ಆಯಾ ಇಲಾಖೆಗಳಿಗೆ ವಹಿಸಿದ ಎಲ್ಲ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತಾಗಬೇಕು ಎಂದರು.ಜಾತ್ರೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಅಧಿಕಾರಿಗಳು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಿದ್ಧತಾ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ನಡೆಸಬೇಕು ಎಂದು ಸೂಚಿಸಿದರು.ಗವಿಸಿದ್ದೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಬೇಕು. ಅಗತ್ಯವಿದ್ಧಲ್ಲಿ ಜಾತ್ರಾ ಸ್ಥಳದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆ ನಿರ್ಮಿಸಬೇಕು. ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರು ಪಾರ್ಕಿಂಗ್ ಸ್ಥಳದಿಂದ ಶ್ರೀಮಠಕ್ಕೆ ಆಗಮಿಸಲು ಅನುಕೂಲವಾಗುವಂತೆ, ಪರವಾನಿಗೆ ಹೊಂದಿದ ಸುಸಜ್ಜಿತ ಆಟೋಗಳನ್ನು ಮಾತ್ರ ನಿರ್ಬಂಧಿತ ಸ್ಥಳಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಶಾಸಕರು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಿದರು.ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ರಥೋತ್ಸವ ದಿನದಂದು ಲಕ್ಷಾಂತರ ಭಕ್ತರು ಮತ್ತು ಇನ್ನುಳಿದ ದಿನಗಳಲ್ಲಿ ಸಹ ಪ್ರತಿ ದಿನ 3 ರಿಂದ 4 ಲಕ್ಷ ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಾರೆ. ಜನವರಿ 23 ರಿಂದ ಜನವರಿ 29ರವರೆಗೆ ಗವಿಸಿದ್ದೇಶ್ವರ ಸಂಸ್ಥಾನ ಶ್ರೀಗವಿಮಠದಿಂದ ವಿವಿಧ ಕಾರ್ಯಕ್ರಮಗಳು ಇರುತ್ತವೆ. ಜಾತ್ರೋತ್ಸವ ಹಿನ್ನೆಲೆಯಲ್ಲಿ ನಿರಂತರ ದಾಸೋಹ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎನ್ನುವ ಮಾಹಿತಿ ಇರುತ್ತದೆ. ಆದ್ದರಿಂದ ನಗರಸಭೆಯ ಅಧಿಕಾರಿಗಳು ಸ್ವಚ್ಛತೆಗೆ, ಕುಡಿಯುವ ನೀರಿನ ಸೌಕರ್ಯಕ್ಕೆ ಮತ್ತು ವಾಹನ ಸೌಲಭ್ಯಕ್ಕೆ ವಿಶೇಷ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ಪೌರಾಯುಕ್ತರಾದ ಗಣಪತಿ ಪಾಟೀಲ ಅವರಿಗೆ ಸೂಚಿಸಿದರು.ಶ್ರೀಮಠಕ್ಕೆ ಸಂಪರ್ಕ ಇರುವ ಎಲ್ಲಾ ರಸ್ತೆಗಳ ರಿಪೇರಿ ಮತ್ತು ಪ್ರತಿ ದಿನ ಕಸ ತೆಗೆಯುವ ವ್ಯವಸ್ಥೆ ಮಾಡಬೇಕು. ಜನವರಿ 21ರಿಂದ ಫೆಬ್ರವರಿ 10ರವರೆಗೆ ಶ್ರೀಮಠದ ಸುತ್ತಲು, ಮಹಾದಾಸೋಹ ಸಂಪರ್ಕ ರಸ್ತೆಗಳು, ಜಾತ್ರಾ ಅಂಗಡಿ, ತೇರು ಸಾಗುವ ಆವರಣ, ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಡಿ ಧೂಳು ಬಾರದಂತೆ ನೀರಿನ ವ್ಯವಸ್ಥೆ ಮಾಡಬೇಕು. ಈ ಕಾರ್ಯಕ್ಕಾಗಿ ಅಗತ್ಯ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕು. ಯಾತ್ರಾರ್ಥಿಗಳಿಗೆ ನೀಡುವ ಕಾಲೇಜ್, ಶಾಲೆ, ಯಾತ್ರಿ ನಿವಾಸ, ವೃದ್ಧಾಶ್ರಮ ಹಾಗೂ ಶ್ರೀಮಠದ ಆವರಣದ ವಸತಿ ಸ್ಥಳಗಳಲ್ಲಿ ಶುಚಿತ್ವ ಇರಬೇಕು. ಸೊಳ್ಳೆಗಳು ಬರದಂತೆ ಫಾಗಿಂಗ್ ಮಾಡಿಸಬೇಕು. ಡಿಟಿಟಿ ಪುಡಿ ಹಾಕಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ ಸಹ ಶುಚಿತ್ವ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪೊಲೀಸ್ ಉಪಧೀಕ್ಷಕರಾದ ಸಿದ್ಧಲಿಂಗಪ್ಪಗೌಡ ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ., ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.