ಸಾರಾಂಶ
ಕೊಪ್ಪಳ:
ಕೊಪ್ಪಳ ಬಸನವನ ನಾಡು, ಇಲ್ಲಿ ಬಸವಪರ ಚಿಂತನೆವುಳ್ಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸುವುದಕ್ಕೆ ಸನ್ನದ್ಧರಾಗೋಣ ಎಂದು ಭಾಲ್ಕಿಯ ಹಿರೇಮಠದ ಗುರುಬಸವ ಪಟ್ಟದದೇವರು ಹೇಳಿದರು.ನಗರದ ಶಿವಸಾಂತ ಮಂಗಲಭವನದದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಮತ್ತು ಕೊಪ್ಪಳದ ಸರ್ವ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಸೆ. ೮ರಂದು ನಗರದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ರೂಪುರೇಷೆ ಸಿದ್ಧಪಡಿಸಲು ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೊಪ್ಪಳ ಸದಾಕಾಲ ಬಸವಾದಿ ಶರಣರ ನಡೆಯಲ್ಲಿ ಸಾಗುತ್ತಿರುವ ನೆಲ. ಇಲ್ಲಿ ಬಸವ ಜಯಂತಿ ಇಡೀ ರಾಜ್ಯದಲ್ಲಿ ಗಮನ ಸೆಳೆಯುವ ಜಯಂತಿಯಾಗಿದೆ. ಪೂರ್ವಭಾವಿ ಸಭೆಯಲ್ಲಿ ಇಷ್ಟು ಬೃಹತ್ ಸಂಖ್ಯೆಯ ಜನ ಸೇರಿರುವುದನ್ನು ನಾನು ಇದೇ ಮೊದಲು ನೋಡುತ್ತಿದ್ದೇನೆ. ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಬಸವ ಸಂಸ್ಕೃತಿ ಅಭಿಯಾನದ ಧ್ಯೇಯೋದ್ದೇಶ, ಅಭಿಯಾನದ ಹಿನ್ನೆಲೆ ಮತ್ತು ಅಭಿಯಾನ ಕೊಪ್ಪಳದಲ್ಲಿ ನೆರವೇರಿಸಲು ಬೇಕಾದ ಪೂರ್ವ ಸಿದ್ಧತೆಯ ಕುರಿತು ವಿವರಿಸಿದರು.ಹಿರಿಯ ಅಭಿಯೋಜಕ ಬಿ.ಎಸ್. ಪಾಟೀಲ ಮಾತನಾಡಿ, ತಮ್ಮಿಂದಲೇ ಹಣಕಾಸಿನ ಸಂಗ್ರಹ ಆರಂಭವಾಗಲಿ ಎಂದು ₹ 15000 ದೇಣಿಗೆ ನೀಡಿದರು. ನಗರದಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಬೇಕಾದ ಎಲ್ಲ ಜವಾಬ್ದಾರಿ ನಿರ್ವಹಿಸುವುದಾಗಿ ತಿಳಿಸಿದರು.ಗಂಗಾವತಿಯ ಶ್ರೀಶೈಲ ಪಟ್ಟಣಶೆಟ್ಟರು, ಎ.ಕೆ. ಮಹೇಶ ಕುಮಾರ, ಸಿದ್ದಣ್ಣ ಜತ್ಲಿ, ವೀರಣ್ಣ ಅರಹುಣಸಿ, ಚನ್ನಬಸವಣ್ಣ ಕೊಟಗಿ, ಮಾಜಿ ಶಾಸಕರಾದ ಶರಣಪ್ಪ, ಟಿ ಬಸವರಾಜ, ಮಲ್ಲಿಕಾರ್ಜುನ ಬಳ್ಳೊಳ್ಳಿ ಗುರುರಾಜ ಹಲಗೇರಿ, ಕದಳಿ ವೇದಿಕೆಯ ನಿರ್ಮಲ ಬಳ್ಳೊಳ್ಳಿ, ಅಪರ್ಣ ಬಳ್ಳೊಳ್ಳಿ, ಅನ್ನಪೂರ್ಣ ಮನ್ನಾಪುರ, ಸೌಮ್ಯ ನಾಲವಾಡ, ಅರ್ಚನಾ ಸಸಿಮಠ, ಅರುಣ ನರೇಂದ್ರ, ಮಂಜುಳಾ ಹುರಕಡ್ಲಿ, ಬಸವಶ್ರೀ ಸೋಮನಾಳ ಸೇರಿದಂತೆ ಗಂಗಾವತಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾ ತಾಲೂಕುಗಳ ವಿವಿಧ ಬಸವಪರ ಸಂಘಟನೆಗಳ 400ಕ್ಕೂ ಹೆಚ್ಚಿನ ಜನ ಪಾಲ್ಗೊಂಡು ಅಭಿಯಾನದ ಸರ್ವಸಿದ್ಧತೆಯ ಕುರಿತು ಚರ್ಚಿಸಿದರು.
ವರ್ತಕ ಸಿದ್ದಣ್ಣ ನಾಲವಾಡ ಮತ್ತು ಅಶೋಕ ಕುಂಬಾರ ತಲಾ ₹ ೫,೦೦೦, ಗಂಗಾವತಿಯ ಚನ್ನಬಸವೇಶ್ವರ ಚಾರಿಟೇಬಲ್ ಟ್ರಸ್ಟ್‌ನವರು ೫ ಕ್ವಿಂಟಲ್ ಅಕ್ಕಿಯ ವಾಗ್ದಾನ ಮಾಡಿದರು. ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಕಾರ್ಯದರ್ಶಿ ರಾಜೇಶ ಸಸಿಮಠ ಮತ್ತು ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ ಸಭೆ ನಿರ್ವಹಿಸಿದರು.