ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಹಿಂದೂ ಎಂದರೆ ಸಮಾಜ ತುಚ್ಛ ಭಾವನೆಯಿಂದ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಶುಭ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಯಲ್ಲೂ ಸಂಘದ ಶಾಖೆಗಳು ನಡೆಯುತ್ತಿವೆ. ಅದಕ್ಕೆ ಪೂರಕವೆಂಬಂತೆ ಇವತ್ತು ಗದ್ದನಕೇರಿ ಗ್ರಾಮದಲ್ಲೂ ಕೂಡಾ ಸಮಿತಿ ಶಾಖೆಗಳು ಇರುವ ಪರಿಣಾಮ ರಾಷ್ಟ್ರ ಸೇವಿಕಾ ಸಮಿತಿಯಿಂದ ಪಥಸಂಚಲನ ನಡೆದಿದೆ ಎಂದು ಮುಖ್ಯ ವಕ್ತಾರರಾಗಿ ಆಗಮಿಸಿದ್ದ ವಿಜಯನಗರ ಪ್ರಾಂತ ಕಾರ್ಯವಾಹಿಕಾ ಮಾ.ವೇದಾ ಕುಲಕರ್ಣಿ ಹೇಳಿದರು.ಕಲಾದಗಿ ಗದ್ದನಕೇರಿ ರಾಷ್ಟ್ರ ಸೇವಿಕಾ ಸಮಿತಿಯಿಂದ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪೌರಾಣಿಕ ಕಾಲದಿಂದಲೂ ನಮ್ಮ ದೇಶದಲ್ಲಿ ಹೆಣ್ಣಿಗೆ ತಾಯಿಯ ಸ್ಥಾನ ಕೊಟಿದ್ದೆವೆ. ಹಿಂದೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ ಪಾತ್ರವೂ ಅಷ್ಟೇ ಪ್ರಾಮುಖ್ಯವಾಗಿದೆ ಎಂದು ಅರಿತು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ ಅವರು ಪ.ಪೂ ಡಾಕ್ಟರ್ ಜೀಯವರ ಮಾರ್ಗದರ್ಶನದಂತೆ 1936ರಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಿಸಿದರು. ಇವತ್ತು ವಿಶ್ವದ ಅತೀ ದೊಡ್ಡ ಮಹಿಳಾ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸ್ತ್ರೀ ಎಂದರೇ ದೇಶದ ಆಧಾರ ಶಕ್ತಿ, ರಾಷ್ಟ್ರದ ಸಾರಥಿ ಇದ್ದಂತೆ. ದೇಶ, ಧರ್ಮಕ್ಕೆ ಕಂಟಕ ಎದುರಾದಾಗ ನಾವೆಲ್ಲರೂ ಎದುರಿಸಲು ಸಿದ್ಧರಾಗಬೇಕು. ಗ್ರಾಮದಲ್ಲಿ ನಡೆಯುವ ಸಮಿತಿ ಶಾಖೆಗಳಿಗೆ ಎಲ್ಲ ಭಗಿನೀಯರು ತಪ್ಪದೇ ಬರಬೇಕು ಜೊತೆಗೆ ಮಕ್ಕಳನ್ನು ಕರೆತರಬೇಕು. ಇಲ್ಲಿ ಕಲಿಯುವ ಆಟ, ಹಾಡು ಶ್ಲೋಕಗಳಲ್ಲಿ ಭಾರತೀಯ ಸಂಸ್ಕೃತಿ ಎತ್ತಿಹಿಡಿಯುವ ವಿಷಯಗಳಿರುತ್ತವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಂತಾ ನಾಯಕ ಮಾತನಾಡಿ, ರಾಷ್ಟ್ರ ಸೇವಿಕಾ ಸಮಿತಿಯು ರಾಷ್ಟ್ರೀಯ ದೃಷ್ಟಿಕೋನವುಳ್ಳ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅತಿ ದೊಡ್ಡ ಸಂಘಟನೆ. ಭಾರತದ ಸ್ವಾತಂತ್ರ ಪೂರ್ವ ಇತಿಹಾಸದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಯಾವ ರೀತಿ ನೂರಾರು ಮಹಿಳೆಯರೂ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೋ ಅದೇ ರೀತಿ ಸ್ವಾತಂತ್ರ ನಂತರದಲ್ಲೂ ದೇಶ, ಧರ್ಮ ಸಂಕಟದಲ್ಲಿದ್ದಾಗ ಮತ್ತೊಮ್ಮೆ ಜಾಗೃತರಾಗಿ ಹೋರಾಟಕ್ಕೆ ಸಿದ್ಧರಾಗೋಣ ಎಂದು ಹೇಳಿದರು.ಸಮಿತಿ ಭಗಿನೀಯರಿಂದ ಅನೇಕ ಶಾರೀರಿಕ ಪ್ರದರ್ಶನಗಳು ನೋಡುಗರಿಗೆ ಆಕರ್ಷನೀಯವಾಗಿದ್ದವು. ವಿಜಯನಗರ ಪ್ರಾಂತ ಘೋಷ ಪ್ರಮುಖ ಸುಧಾ ದೇಸಾಯಿ, ಜಿಲ್ಲಾ ಕಾರ್ಯವಾಹಿಕಾ ಜ್ಯೋತಿ ಕದಾಂಪೂರ, ಜಿಲ್ಲಾ ಶಾರೀರಿಕ ಪ್ರಮುಖ ಮಂಜುಳಾ ಚಮಚಿ, ಬಾಗಲಕೋಟೆ ನಗರ ಕಾರ್ಯವಾಹಿಕಾ ಸುಮನ ರಜಪೂತ ಸೇರಿದಂತೆ ಸಂಘಟನೆಯ ಪ್ರಮುಖರು ಇದ್ದರು.
ಗಮನ ಸೆಳೆದ ಪಥಸಂಚಲನ:ಗದ್ದನಕೇರಿಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಸಂಕ್ರಾಂತಿ ಉತ್ಸವ ಹಾಗೂ ಶಾಖಾ ಧ್ವಜ ಪ್ರಧಾನ ಕಾರ್ಯಕ್ರಮದ ನಿಮಿತ್ತವಾಗಿ ಭಾನುವಾರ ಗ್ರಾಮದಲ್ಲಿ ನಡೆದ ಪಥಸಂಚಲನದಲ್ಲಿ ಸುಮಾರು ಎರಡನೂರಕ್ಕೂ ಹೆಚ್ಚು ರಾಷ್ಟ್ರ ಸೇವಿಕೆಯರಿಂದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಗ್ರಾಮದ ಆನದಿನ್ನಿ ಕ್ರಾಸ್ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಸರಿಯಾಗಿ 4ಗಂಟೆಗೆ ಪ್ರಾರಂಭವಾಗಿ ಪ್ರಮುಖ ಬೀದಿಗಳಾದ ಅಂಚೆ ಕಚೇರಿ, ಸಿದ್ದಾರೂಢ ಮಠದ ರಸ್ತೆ, ಬಾಗಲಕೋಟೆ ರಸ್ತೆ ಮಾರ್ಗವಾಗಿ, ಸಪ್ತಗಿರಿ ಬಡಾವಣೆ 3ನೇ ಕ್ರಾಸ್, ಗಣೇಶ ಗುಡಿ, ಸಿದ್ರಾಮೇಶ್ವರ ಬಡಾವಣೆ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಗ್ರಾಪಂ ಗದ್ದನಕೇರಿ, ಹಣಮಂತದೇವರ ಗುಡಿ(ಅಗಸಿ) ಮೂಲಕ ನಾಗೇಶ ಪೂರ್ವ ಪ್ರಾಥಮಿಕ ಶಾಲೆಗೆ ತಲುಪಿ ಸಾರ್ವಜನಿಕ ಸಮಾರಂಭವಾಗಿ ಮಾರ್ಪಾಡಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಂಟ್ಟಿಂಗ್ಸ್, ಭಾವುಟ, ಮನೆಗಳ ಮುಂದೆ ರಂಗೋಲಿಯ ಚಿತ್ತಾರಗಳು ಸಂಚಲನದುದ್ದಕ್ಕೂ ಜಯಘೋಷಗಳು ಮೊಳಗುತ್ತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿ ಸಾವಿರಾರು ಸಂಖೆಯಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿಗೈದು ಸಡಗರದಿಂದ ಸ್ವಾಗತಿಸುತ್ತಿದ್ದದ್ದೂ ಕಂಡು ಬಂತು. ಪಥಸಂಚಲನಕ್ಕೆ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.