ಧಾರವಾಡ ನಗರದ ಸರ್ಕಾರಿ ಹಾಗೂ ಅನುದಾನಿತ, ಅನುದಾನ ರಹಿತ ವಿವಿಧ ಶಾಲೆಗಳ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಬರೋಬ್ಬರಿ 6 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಗಾರ ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸುವಲ್ಲಿ ಯಶಸ್ವಿಯಾಯಿತು.

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ತಜ್ಞರ ಸಲಹೆ

ಆತಂಕದಿಂದ ಬಂದು ಆತ್ಮವಿಶ್ವಾಸದೊಂದಿಗೆ ಹೊರನಡೆದ ಮಕ್ಕಳು

ಧಾರವಾಡ:

ಪರೀಕ್ಷೆ ಬಗ್ಗೆ ಭಯಬಿಡಿ; ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಪರೀಕ್ಷೆಯನ್ನೇ ಹಬ್ಬದಂತೆ ಸಂಭ್ರಮಿಸಿ, ಕಟ್ಟುನಿಟ್ಟಿನ ಟೈಮ್‌ ಟೇಬಲ್‌ ಪ್ರಕಾರ, ಶಿಸ್ತು-ಬದ್ಧತೆ, ಸಮಯ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ಮಾಡಿದರೆ ಸಾಕು. ಯಶಸ್ಸು ತಾನಾಗಿಯೇ ನಿಮ್ಮದಾಗುತ್ತದೆ!

ಇದು ಇಲ್ಲಿನ ಜೆಎಸ್‌ಎಸ್‌ ಆವರಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಶಾಲಾ ಶಿಕ್ಷಣ ಇಲಾಖೆ, ಜನತಾ ಶಿಕ್ಷಣ ಸಮಿತಿ, ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಏರ್ಪಡಿಸಿದ್ದ "ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ " ಕಾರ್ಯಾಗಾರದಲ್ಲಿ ಗಣ್ಯರು, ತಜ್ಞ ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತುಗಳಿವು.

ಧಾರವಾಡ ನಗರದ ಸರ್ಕಾರಿ ಹಾಗೂ ಅನುದಾನಿತ, ಅನುದಾನ ರಹಿತ ವಿವಿಧ ಶಾಲೆಗಳ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಬರೋಬ್ಬರಿ 6 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಗಾರ ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸುವಲ್ಲಿ ಯಶಸ್ವಿಯಾಯಿತು. ಆತಂಕದಿಂದ ಕೊಠಡಿ ಪ್ರವೇಶಿಸಿದ್ದ ಮಕ್ಕಳು ಕಾರ್ಯಾಗಾರ ಮುಗಿಸಿಕೊಂಡು ಹೋಗುವಾಗ ಹೊಸ ಹುಮ್ಮಸ್ಸಿನೊಂದಿಗೆ ಮಂದಹಾಸ ಬೀರುತ್ತಾ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕಿದರು.

ಪರೀಕ್ಷೆ ಭಯ ಏಕೆ ಬರುತ್ತದೆ? ಅದನ್ನು ಹೋಗಲಾಡಿಸಬೇಕೆಂದರೆ ನಾವೇನು ಮಾಡಬೇಕು? ಎಷ್ಟೊತ್ತು ಅಧ್ಯಯನ ಮಾಡಿದರೆ ಒಳಿತು? ಯಾವ್ಯಾವ ವಿಷಯಗಳನ್ನು ಹೇಗೆ ಓದಬೇಕು? ಹೇಗೆ ಪುನರ್‌ ಮನನ ಮಾಡಬೇಕು? ಏಕಾಗ್ರತೆ ಹೆಚ್ಚಿಸಿಕೊಳ್ಳುವ ಬಗೆಯ ಹೇಗೆ? ಎಂಬುದನ್ನೆಲ್ಲ ಸಂಪನ್ಮೂಲ ವ್ಯಕ್ತಿಗಳು, ಅತಿಥಿಗಳು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳು ಉದಾಹರಣೆ ಸಹಿತವಾಗಿ ವಿವರಿಸುತ್ತಾ ಹೋದರೆ, ಮಕ್ಕಳು ಸಹ ಅಷ್ಟೇ ಉತ್ಸಾಹದೊಂದಿಗೆ ಪಾಲ್ಗೊಂಡಿದ್ದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜೆಎಸ್‌ಎಸ್‌ ಕಾರ್ಯದರ್ಶಿ ಅಜಿತ್‌ ಪ್ರಸಾದ, ಸಕಾರಾತ್ಮಕವಾಗಿ ಯೋಚನೆ ಮಾಡಿ. ಅಧ್ಯಯನದಷ್ಟೇ ನಿದ್ದೆ, ಧ್ಯಾನ, ಪೋಷಾಕಾಂಶದ ಆಹಾರವೂ ಮುಖ್ಯ. ವಿದ್ಯಾಭ್ಯಾಸದ ನೆಪದಲ್ಲಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ಪರೀಕ್ಷೆ ಬಗ್ಗೆ ಭಯ ಹೋಗಬೇಕೆಂದರೆ ಅಧ್ಯಯನ, ಪರಿಶ್ರಮ ಇದ್ದಾಗ ಸಾಧ್ಯ ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ಎಸ್‌ಎಸ್‌ಎಲ್‌ಸಿ ಜೀವನದ ಮೊದಲ ಘಟ್ಟ. ಇದನ್ನು ಸಮರ್ಥವಾಗಿ ಎದುರಿಸಬೇಕು. ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಆದರೆ ಪರೀಕ್ಷೆ ಎಂಬುದಕ್ಕೆ ಭಯ ಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತುಕೊಂಡರೆ ಪರೀಕ್ಷೆಯನ್ನು ಸಲೀಸಾಗಿ ದಾಟಬಹುದು ಎಂದು ನುಡಿದರು.

ಕನ್ನಡಪ್ರಭ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಪ್ರಾಸ್ತಾವಿಕ ಮಾತನಾಡಿ, ಮಕ್ಕಳು ದೇಶದ ಭವಿಷ್ಯ. ಜೀವನದಲ್ಲಿನ ಮೊದಲ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆ. ಇದನ್ನು ಅವರು ಸಮರ್ಥವಾಗಿ ಎದುರಿಸಿ ಗೆದ್ದರೆ ಮುಂದೆ ಜೀವನದಲ್ಲಿನ ಪರೀಕ್ಷೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಇಲ್ಲೇ ಎಡವಿದರೆ ಮುಂದೆ ಕಷ್ಟವಾಗುತ್ತದೆ. ಹೀಗಾಗಿ ಅವರಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಕನ್ನಡಪ್ರಭ ಪ್ರತಿವರ್ಷ ಆಯೋಜಿಸುತ್ತಿದೆ. ಪರೀಕ್ಷೆ ಭಯದಿಂದ ಹೊರಬಂದು ಹಬ್ಬದಂತೆ ಪರೀಕ್ಷೆ ಎದುರಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮನರಂಜನೆಗೂ ಆದ್ಯತೆ:

ಕಾರ್ಯಾಗಾರವನ್ನು ಬರೀ ಅಧ್ಯಯನ, ಪಾಠ ಪ್ರವಚನಕ್ಕಷ್ಟೇ ಸೀಮಿತಗೊಳಿಸದೇ, ಜಾನಪದ, ಭಾವಗೀತೆ, ಸುಗಮ ಗೀತೆಗಳನ್ನು ಹಾಡುವ ಮೂಲಕ ಮಕ್ಕಳನ್ನು ರಂಜಿಸುವ ಕಾರ್ಯವೂ ನಡೆಯಿತು. ಮಕ್ಕಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಗೀತಗಾಯನ ಯಶಸ್ವಿಯಾಯಿತು.

ಧಾರವಾಡ ಬಿಇಒ ರಾಮಕೃಷ್ಣ ಸದಲಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ನಾಡದ, ಕ್ಷೇತ್ರ ಸಮನ್ವಯ ಅಧಿಕಾರಿ ಪ್ರವೀಣಕುಮಾರ, ಜೆಎಸ್‌ಎಸ್‌ ಐಟಿಐ ಕಾಲೇಜು ಪ್ರಾಚಾರ್ಯ ಉಪಾಧ್ಯಾಯ, ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಬಿ. ಪುರುಷೋತ್ತಮ, ಸಿದ್ದಲಿಂಗೇಶ ಗದುಗಿನ, ಹರಿಪ್ರಸಾದ ಪಿ., ಜಡೇಶ, ಎಮ್ಮಿಗನೂರ, ಮೆಹತಾಬ ಕಪ್ಪಗಲ್‌, ಚಂದ್ರಶೇಖರ ಆಚಾರ್‌ ಕಪ್ಪಗಲ್‌, ಪ್ರಾದೇಶಿಕ ಸಾರಿಗೆ ಇಲಾಖೆ ವಿವಿಧ ಅಧಿಕಾರಿಗಳು ಸೇರಿದಂತೆ ಹಲವರಿದ್ದರು. ಮಕ್ಕಳಿಗೆ ಇದೇ ವೇಳೆ ರಸ್ತೆ ಸುರಕ್ಷತೆ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ಧಾರವಾಡದ ಪ್ರಧಾನ ವರದಿಗಾರ ಬಸವರಾಜ ಹಿರೇಮಠ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಕನ್ನಡಪ್ರಭದ ಮಧುಕೇಶ್ವರ ಯಾಜಿ, ಶಿವಾನಂದ ಗೊಂಬಿ, ಮಧುಕರ ಭಟ್‌, ಶಿವಾನಂದ ಅಂಗಡಿ, ವೆಂಕಟೇಶ ಲಾಳಗೆ, ಶಶಿಕುಮಾರ ಪತಂಗೆ, ನಿಂತರಾಜ ಹುಲ್ಲೂರ, ಸದ್ದಾಂ ಮುಲ್ಲಾ ಮತ್ತು ಎಲ್ಲ ಶಾಲೆಗಳ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.