ಮೊಬೈಲ್ ಎನ್ನುವ ಮಾಯಾವಿಯ ಹಿಂದೆ ಬಿದ್ದಿರುವ ಇಂದಿನ ಯುವ ಜನತೆ ಕನ್ನಡ ನಾಡಿನ ಭವ್ಯ ಪರಂಪರೆಯನ್ನು ಮರೆತಿದ್ದಾರೆ. ಆದ್ದರಿಂದ ಮೊಬೈಲ್ ಗೀಳಿನಿಂದ ಹೊರಬಂದು ನಾಡು-ನುಡಿ ಕಟ್ಟುವಲ್ಲಿ ಶ್ರಮಿಸಬೇಕಿದೆ ಎಂದು ತಾಲೂಕು ೯ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸಿ. ಕವಿತಾ ನುಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಮೊಬೈಲ್ ಎನ್ನುವ ಮಾಯಾವಿಯ ಹಿಂದೆ ಬಿದ್ದಿರುವ ಇಂದಿನ ಯುವ ಜನತೆ ಕನ್ನಡ ನಾಡಿನ ಭವ್ಯ ಪರಂಪರೆಯನ್ನು ಮರೆತಿದ್ದಾರೆ. ಆದ್ದರಿಂದ ಮೊಬೈಲ್ ಗೀಳಿನಿಂದ ಹೊರಬಂದು ನಾಡು-ನುಡಿ ಕಟ್ಟುವಲ್ಲಿ ಶ್ರಮಿಸಬೇಕಿದೆ ಎಂದು ತಾಲೂಕು ೯ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸಿ. ಕವಿತಾ ನುಡಿದರು.

ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸೊರಬ ಹಾಗೂ ಕನ್ನಡ ಜಾನಪದ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೯ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಮಂತ ಇತಿಹಾಸವನ್ನು ಹೊಂದಿದ ಕನ್ನಡ ನಾಡು ಪೌರಾಣಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಅದರೆ ಅದನ್ನು ಆಸ್ವಾಧಿಸುವಲ್ಲಿ ಮತ್ತು ಕನ್ನಡತನವನ್ನು ಬೆಳೆಸುವಲ್ಲಿ ಎಡುವುತ್ತಿದ್ದೇವೆ. ಅನ್ಯಭಾಷೆ ನಾಡಿನಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿರುವುದು ಮತ್ತು ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕಿರುವ ಯುವ ಜನತೆ ಮೊಬೈಲ್ ಗೀಳಿಗೆ ದಾಸನಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಗತ್ತಿಗೆ ಸಂದೇಶ ಸಾರಿದ ಆಚಾರ್ಯರು ಗುರುಗಳು ಕವಿಗಳು ವಿಶ್ವಕ್ಕೆ ಸಂಸ್ಕಾರದ ಪಾಠವನ್ನು ಹೇಳಿಕೊಟ್ಟವರು. ಅವರು ಹಾಕಿಕೊಟ್ಟ ಜ್ಞಾನದ ಬುನಾದಿಯ ಮೇಲೆ ಕನ್ನಡತನವನ್ನು ಗಟ್ಟಿಗೊಳಿಸಬೇಕಿದೆ ಎಂದರು.

ವಿಶೇಷ ಆಹ್ವಾನಿತರಾಗಿ ಅನುಷಾ ಕರಿಬಸವಯ್ಯ ಹಿರೇಮಠ್ ಮಾತನಾಡಿ, ಕನ್ನಡದ ಪ್ರಾಧ್ಯಾಪಕರು ಪರೀಕ್ಷೆ ದೃಷ್ಟಿಯಿಂದ ಪಾಠ ಮಾಡದೇ ಕನ್ನಡತನವನ್ನು ಗಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೇರಣೆ ನೀಡಬೇಕು. ಮಕ್ಕಳ ಸಾಹಿತ್ಯ ಸಮ್ಮೇಳನಗಳು ಉತ್ಸವ ಮೆರವಣಿಗಳಿಗೆಷ್ಟೇ ಸೀಮಿತವಾಗದೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಕನ್ನಡತನವನ್ನು ಬೆಳಗಿಸುವ ವೇದಿಕೆಗಳಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಎಸ್.ಕೆ. ಶುಕೃತ್‌ ಮಾತನಾಡಿ, ಕ್ರಿಯಾಶೀಲತೆ ಮತ್ತು ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದ್ದಲ್ಲಿ ಕನ್ನಡಿಗರು ಉತ್ತಮವಾದ ಸಾಧಕರಾಗಬಹುದು ಎಂದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಇಂತಹ ಸಮ್ಮೇಳನಗಳಿಂದ ತಾಲೂಕಿನಲ್ಲಿ ಅನೇಕ ಪ್ರತಿಭೆಗಳು, ಕವಿಗಳು, ಕಥೆಗಾರ್ತಿಯರು ವಿವಿಧ ಕ್ಷೇತ್ರಗಳ ಸಾಧಕರು ನಿರ್ಮಾಣಗೊಳ್ಳುವುದಲ್ಲದೆ ಕನ್ನಡ ಕಟ್ಟುವ ಮನಸ್ಸುಗಳು ಹತ್ತಿರವಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಸೊರಬ ಕಸಾಪ ಅಧ್ಯಕ್ಷ ಎನ್. ಷಣ್ಮುಖ ಆಚಾರ್, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಖಲಂದರ್ ಸಾಬ್, ಸಾಹಿತಿ ರೇವಣಪ್ಪ ಬಿದರಗೆರೆ, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ವಿಜಯಕುಮಾರ್ ದಟ್ಟೇರ್, ಕಾರ್ಯದರ್ಶಿ ಮಹೇಶ್ ಖಾರ್ವಿ, ಶಿಲ್ಪ ಅನೂಪ್ ಆನವಟ್ಟಿ ಹಾಗೂ ಶಿಕ್ಷಣ ಇಲಾಖೆ ಸಂಜೀವ್ ಸೇರಿದಂತೆ ವಿಚಾರ ಗೋಷ್ಠಿಯ ಅಧ್ಯಕ್ಷರಾದ ತಪಸ್ವಿನಿ, ಕವಿಗೋಷ್ಠಿಯ ಅಧ್ಯಕ್ಷರಾದ ಅಮೂಲ್ಯ, ಕಥಾಗೋಷ್ಠಿಯ ಅಧ್ಯಕ್ಷರಾದ ಯು. ಸಾನಿಧ್ಯ ಸೇರಿದಂತೆ ಮೊದಲಾದವರಿದ್ದರು.