ಓದಿನ ಜತೆ ಕೌಶಲ್ಯ ತರಬೇತಿ ಪಡೆಯಿರಿ: ಶಾಸಕ ಪ್ರಕಾಶ ಕೋಳಿವಾಡ

| Published : Aug 19 2025, 01:00 AM IST

ಓದಿನ ಜತೆ ಕೌಶಲ್ಯ ತರಬೇತಿ ಪಡೆಯಿರಿ: ಶಾಸಕ ಪ್ರಕಾಶ ಕೋಳಿವಾಡ
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು, ಕಲಿಕೆ ಹಾಗೂ ಕೈಗಾರಿಕೆ ಕೌಶಲ್ಯದ ನಡುವೆ ಅಂತರವಿರುತ್ತದೆ. ಹಾಗಾಗಿ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯದ ತರಬೇತಿ ಅಗತ್ಯವಾಗಿದೆ.

ಹಾವೇರಿ: ವಿದ್ಯಾರ್ಥಿಗಳು ಓದಿನೊಂದಿಗೆ ಕೌಶಲ್ಯ ತರಬೇತಿ ಪಡೆದುಕೊಳ್ಳಬೇಕು. ಶಾಲಾ ಹಂತದಿಂದಲೇ ಮಕ್ಕಳಿಗೆ ಕೌಶಲ್ಯ ಕಲಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯ ಯುವನಿಧಿ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಆಯೋಜಿಸಿದ್ದ ಅರಿವು ಉದ್ಯೋಗವಕಾಶಗಳ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು, ಕಲಿಕೆ ಹಾಗೂ ಕೈಗಾರಿಕೆ ಕೌಶಲ್ಯದ ನಡುವೆ ಅಂತರವಿರುತ್ತದೆ. ಹಾಗಾಗಿ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯದ ತರಬೇತಿ ಅಗತ್ಯವಾಗಿದೆ. ಯುವ ಸಮೂಹ ತಂತ್ರಜ್ಞಾನ ಸರಿಯಾಗಿ ಬಳಕೆ ಮಾಡಿಕೊಂಡು ಹಾಗೂ ಯುವನಿಧಿ ಹಣವನ್ನು ಕೌಶಲ್ಯ ತರಬೇತಿಗೆ ಉಪಯೋಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.ದೇಶದಲ್ಲಿ ದುಡಿಯುವ ಕೈಗಳು ಹೆಚ್ಚಾದರೆ ಆದೇಶ ಆರ್ಥಿಕ ಅಭಿವೃದ್ಧಿ ಜತೆಗೆ ವಿಶ್ವಗುರು ಆಗಲು ಸಾಧ್ಯ. ಹಾಗಾಗಿ ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಅವುಗಳ ಬಗ್ಗೆ ತಿಳಿದುಕೊಂಡು ಸ್ವಂತ ಉದ್ಯಮಗಳನ್ನು ಆರಂಭಿಸಿ ಸದೃಢ ದೇಶ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ದೇಶದಲ್ಲಿ ಲಕ್ಷಕ್ಕೂ ಅಧಿಕ ಕಾಲೇಜುಗಳಿವೆ. ಪ್ರತಿವರ್ಷ ಕೋಟಿಗೂ ಅಧಿಕ ಪದವೀಧರರು ಹೊರಬರುತ್ತಿದ್ದಾರೆ. ನೂರು ಜನರಲ್ಲಿ ಶೇ. 22.6ರಷ್ಟು ಜನರಿಗೆ ಮಾತ್ರ ಉದ್ಯೋಗ ನೀಡಬಹುದು. ಹಾಗಾಗಿ ಯುವ ಸಮೂಹ ಜ್ಞಾನದ ಜತೆಗೆ ಕೌಶಲ್ಯ ರೂಢಿಸಿಕೊಳ್ಳಬೇಕು. ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯ ಯುವ ಸಮೂಹ ಕಲಿಯಬೇಕು ಎಂದರು.ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿಯಿಂದ ಏನಾದರೂ ಸಾಧಿಸಬಹುದು. ಸಮಯಕ್ಕೆ ಬಹಳ ಮಹತ್ವ ಇದೆ. ಜೀವನದಲ್ಲಿ ಶಿಸ್ತು, ಸಮಯಪಾಲನೆ ಮಾಡಿದರೆ ಯಶಸ್ಸು ಸಾಧ್ಯ. ದುಡಿಯುವ ಮನಸ್ಸು, ಸಾಧಿಸುವ ಛಲ ಇದ್ದರೆ ಮಿಲೆನಿಯನ್ ಹಾಗೂ ಬಿಲೆನಿಯನ್ ಕೂಡ ಆಗಬಹುದು. ಧೈರ್ಯದಿಂದ ಮುನ್ನುಗ್ಗಬೇಕು. ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕೃಷಿ, ತೋಟಗಾರಿಕೆ, ಹಣ್ಣು, ತರಕಾರಿ, ಹಾಲು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಇಂತಹ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿದರು. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಸೋನಾಲಿ ಕ್ಷೀರಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಬ್ಯಾಡಗಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಂಭನಗೌಡ ಪಾಟೀಲ ಹಾಗೂ ಸವಣೂರು ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ಇತರರು ಉಪಸ್ಥಿತರಿದ್ದರು. ನಾಗಪ್ಪ ಗೋಡಿ ಸ್ವಾಗತಿಸಿದರು. ಕುಮಾರ ಬಿದರಗಡ್ಡಿ ನಿರೂಪಿಸಿದರು. ಚೇತನಕುಮಾರ ಮೊಹತೆ ವಂದಿಸಿದರು.