ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಕಂದಾಯ ಇಲಾಖೆಯ ಮೂಲಕ ಸರಕಾರ ನೀಡುವ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಪಿಂಚಣಿ ಹಣವು ಫಲಾನುಭವಿಗಳ ಸ್ವಾವಲಂಬಿ ಬದುಕಿಗೆ ಉಪಯುಕ್ತವಾಗಿದೆ. ಜನರು ಸರಕಾರದ ಪಿಂಚಣಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲಾದಗಿ ಉಪತಹಸೀಲ್ದಾರ್ ಎಸ್.ಬಿ. ಇಟಗಿ ಹೇಳಿದರು.ಕಲಾದಗಿ ಹೊಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಕಲಾದಗಿ ಹೊಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಮಾಡಲಾಗುತ್ತಿದೆ. ವಯೋವೃದ್ಧರು, ವಿಶೇಷ ಚೇತನರು, ವಿಧವೆಯರು, ಮೈತ್ರಿ, ಮನಸ್ವಿನಿ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ಮೂಲಕ ಸರ್ಕಾರ ನೀಡುವ ಪಿಂಚಣಿ ಅರ್ಹರಿಗೆ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬದುಕಿಗೆ ತುಂಬಾ ಸಹಕಾರಿಯಾಗಿದೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿಯೂ ಸಹ ಈ ಯೋಜನೆ ಸಹಕಾರಿಯಾಗಿದೆ. ಪಿಂಚಣಿ ಪಡೆಯಲು ಅರ್ಹ ಫಲಾನುಭವಿಗಳು ಯಾರೇ ಮದ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ತಮ್ಮ ಗ್ರಾಮ ಆಡಳಿತ ಅಧಿಕಾರಿ ಇಲ್ಲವೆ ನಾಡ ಕಚೇರಿಗೆ ಬಂದು ಅಗತ್ಯ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ ಪಿಂಚಣಿ ಸೌಲಭ್ಯ ಪಡೆಯಬಹುದು ಎಂದರು.
ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಸಂದ್ಯಾ ಸುರಕ್ಷಾ ೧, ಅಂಗವಿಕಲ ೧, ಮನಸ್ವಿನಿ ೧, ವಿಧವಾ ವೇತನ ೨ ಪಿಂಚಣಿ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.ಕಂದಾಯ ನಿರೀಕ್ಷಕ ಪ್ರಕಾಶ್ ನಾಯ್ಕ, ಗ್ರಾಮ ಆಡಳಿತಾಧಿಕಾರಿ ಸಂತೋಷ ತೇಲಿ, ಶ್ರೀಕಾಂತ ಪಾಟೀಲ, ರವಿ ಕುಳ್ಳೊಳ್ಳಿ, ರವಿ ಚೆಲವಾದಿ, ವಿಷಯ ನಿವಾಹಕ ನಾಗರಾಜ ಸಜ್ಜನ, ಗ್ರಾಮ ಸಹಾಯಕ ತೌಶಿಪ್ ಮಾಲ್ದಾರ ಇನ್ನಿತರರು ಇದ್ದರು.