ಸಾರಾಂಶ
ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ಪಡೆದು ಅದರ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಹೊಸತನ ಕಂಡುಕೊಳ್ಳಬೇಕಲ್ಲದೆ ಪ್ರಗತಿ ಸಾಧಿಸಬೇಕು
ಕನ್ನಡಪ್ರಭ ವಾರ್ತೆ ಮುಂಡಗೋಡ
ಇಲಾಖೆ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಮಾಜಿ ಶಾಸಕ ವಿ.ಎಸ್. ಪಾಟೀಲ ಕರೆ ನೀಡಿದರು.ಶನಿವಾರ ತಾಲೂಕಿನ ಸಾಲಗಾಂವ ಗ್ರಾಪಂ ಆವರಣದಲ್ಲಿ ಜಿಪಂ, ಕೃಷಿ ಇಲಾಖೆ, ಕೃಷಿಕ ಸಮಾಜ ಮುಂಡಗೋಡ ಮತ್ತು ಗ್ರಾಪಂ ಸಾಲಗಾಂವ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ದಿನಾಚರಣೆ ಹಾಗೂ ಬೀಜೋಪಚಾರ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದೆ. ಅವುಗಳ ಬಗ್ಗೆ ಸಮರ್ಪಕ ಮಾಹಿತಿ ಪಡೆದು ಅದರ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಹೊಸತನ ಕಂಡುಕೊಳ್ಳಬೇಕಲ್ಲದೆ ಪ್ರಗತಿ ಸಾಧಿಸಬೇಕು ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ರೈತರು ಹೆಚ್ಚೆಚ್ಚು ಆರ್ಥಿಕ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಗಣಪತಿ ಬಾಳಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ, ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್ ಕುಲಕರ್ಣಿ, ಕೃಷಿ ಅಧಿಕಾರಿ ಅರವಿಂದ ಕಮ್ಮಾರ, ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಶ್ರೇಷ್ಟ ಕೃಷಿ ಪ್ರಶಸ್ತಿ ಪುರಸ್ಕೃತ ಬಸವರಾಜ ನಡುವಿನಮನಿ, ಅನ್ನಪೂರ್ಣ ಬೆಣ್ಣಿ, ಎಂ.ಪಿ ಕುಸೂರ, ಪೀರಪ್ಪ ಸಾಗರ, ಗೌರೀಶ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೇಷ್ಟ ಕೃಷಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸಲಾಯಿತು.