ವಿದ್ಯಾರ್ಥಿಗಳನ್ನು ಹೊರ ಹಾಕಿ ಶಾಲೆಗೆ ಬೀಗ!

| Published : Feb 01 2025, 12:02 AM IST

ಸಾರಾಂಶ

1958ರಲ್ಲಿ ಕೃಷ್ಣಪ್ಪ ತಾಂಬೆ ಎಂಬುವರ ತಂದೆ 10 ಗುಂಟೆ ಜಾಗವನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ. ಆಗ ಸರ್ಕಾರ ಶಾಲೆಯ ಹೆಸರಿನಲ್ಲಿ ಆ ಜಾಗವನ್ನು ನೋಂದಣಿ ಮಾಡಿಸಿಕೊಳ್ಳದೆ ಕಟ್ಟಡ ನಿರ್ಮಿಸಿದೆ. ಹೀಗಾಗಿ ಪಹಣಿಯಲ್ಲಿ ನಮ್ಮ ತಂದೆಯ ಹೆಸರು ಇದ್ದು ಈ ಜಾಗ ನಮ್ಮದೆಂದು ಕಳೆದ 10 ವರ್ಷಗಳಿಂದ ಕೃಷ್ಣಪ್ಪ ತಾಂಬೆ ತಕರಾರು ತೆಗೆದಿದ್ದಾರೆ.

ಕಲಘಟಗಿ:

ತಾಲೂಕಿನ ಕಲಕುಂಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಾಲೆಯ ಜಾಗದ ಮಾಲೀಕ ಶಾಲೆಯಿಂದ ಹೊರಗೆ ಹಾಕಿ ಶಾಲೆಗೆ ಬೀಗ ಹಾಕಿದ ಘಟನೆ ಶುಕ್ರವಾರ ಜರುಗಿದೆ. ಇದರಿಂದ ಮಕ್ಕಳು ಸುಡುವ ಉರಿ ಬಿಸಿಲಿನಲ್ಲಿ ಗೇಟ್‌ ಮುಂಭಾಗ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕೂಡಬೇಕಾಯಿತು. ಶಿಕ್ಷಕರು ಕೂಡಾ ನಿಂತುಕೊಂಡೇ ಪಾಠ ಮಾಡಿದರು.

ಆಗಿದ್ದೇನು?:

1958ರಲ್ಲಿ ಕೃಷ್ಣಪ್ಪ ತಾಂಬೆ ಎಂಬುವರ ತಂದೆ 10 ಗುಂಟೆ ಜಾಗವನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ. ಆಗ ಸರ್ಕಾರ ಶಾಲೆಯ ಹೆಸರಿನಲ್ಲಿ ಆ ಜಾಗವನ್ನು ನೋಂದಣಿ ಮಾಡಿಸಿಕೊಳ್ಳದೆ ಕಟ್ಟಡ ನಿರ್ಮಿಸಿದೆ. ಹೀಗಾಗಿ ಪಹಣಿಯಲ್ಲಿ ನಮ್ಮ ತಂದೆಯ ಹೆಸರು ಇದ್ದು ಈ ಜಾಗ ನಮ್ಮದೆಂದು ಕಳೆದ 10 ವರ್ಷಗಳಿಂದ ಕೃಷ್ಣಪ್ಪ ತಾಂಬೆ ತಕರಾರು ತೆಗೆದಿದ್ದಾರೆ.

ಈ ಅವಧಿಯಲ್ಲಿ ಎರಡ್ಮೂರು ಬಾರಿ ಶಾಲೆಗೆ ಬೀಗವನ್ನು ಹಾಕಿದ್ದಾರೆ. ಅಷ್ಟಾದರೂ ಶಿಕ್ಷಣ ಇಲಾಖೆ ಇತ್ತ ಚಿತ್ತ ಹರಿಸಿಲ್ಲ. ಇತ್ತೀಚೆಗೆ ಇ-ಖಾತಾ ಮಾಡಿಸಲು ಹೋದಾಗ ಶಾಲೆಯ ಜಾಗ ಕೃಷ್ಣಪ್ಪ ತಾಂಬೆ ಅವರ ತಂದೆಯ ಹೆಸರಿನಲ್ಲಿ ಇರುವುದು ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ. ಆದರೆ, ಗ್ರಾಮ ಪಂಚಾಯಿತಿ ದಾಖಲೆಯಲ್ಲಿ ಮಾತ್ರ ಶಾಲೆಯ ಹೆಸರಿದೆ.

ಬಿಇಒ ಭೇಟಿ:

ಈ ಮಧ್ಯೆ ಶುಕ್ರವಾರವೂ ಮತ್ತೆ ಶಾಲೆಗೆ ಕೃಷ್ಣಪ್ಪ ತಾಂಬೆ ಬೀಗ ಹಾಕಿದ್ದರು. ಈ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಹಾಗೂ ಪೊಲೀಸ್ ಸಿಬ್ಬಂದಿ ತಕರಾರು ಮಾಡಿರುವ ಕುಟುಂಬದ ಸದಸ್ಯರ ಜೊತೆ ಮಾತನಾಡಿ ಶಾಲೆಗೆ ಹಾಕಿರುವ ಬೀಗವನ್ನು ತೆಗೆಸುವಲ್ಲಿ ಯಶಸ್ವಿಯಾದರು. ಹೀಗಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಕ್ಕಳು ಗೇಟ್‌ ಮುಂಭಾಗವೇ ಅಭ್ಯಾಸ ಮಾಡಬೇಕಾಯಿತು. ಆದರೆ, ಕುಟುಂಬದವರು ಕೆಲವು ದಿನಗಳಿಗೆ ಮಾತ್ರ ರಾಜಿಯಾಗಿದ್ದು ಮತ್ತೆ ಇಂತಹ ಘಟನೆ ಮರುಕಳಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವ ಸಂತೋಷ ಲಾಡ್ ಇತ್ತಕಡೆ ಗಮನ ಹರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಕಲಕುಂಡಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.ಗೇಟ್‌ ಮುಂಭಾಗ ಮಕ್ಕಳಿಗೆ ಪಾಠ

ಕೃಷ್ಣಪ್ಪ ತಾಂಬೆ ಅವರು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಕ್ಕಳು, ಶಿಕ್ಷಕರನ್ನು ಶಾಲೆಯಿಂದ ಹೊರಹಾಕಿ ಬೀಗ ಹಾಕಿದರು. ಹೀಗಾಗಿ ಮಕ್ಕಳಿಗೆ ಗೇಟ್‌ ಮುಂಭಾಗವೇ ಶಿಕ್ಷಕರು ತಾಡಪತ್ರೆ ಹಾಸಿ ಅಲ್ಲಿಯೇ ಪಾಠ ಮಾಡಿದರು. ಮಕ್ಕಳು ಬಿಸಿಲಿನಲ್ಲಿಯೇ ಅಭ್ಯಾಸ ಮಾಡಬೇಕಾಯಿತು. ಶಾಲೆಯ ಬಳಿ ಗ್ರಾಮಸ್ಥರು ಮಕ್ಕಳ ಸ್ಥಿತಿ ನೋಡಿ ಮರುಕ ವ್ಯಕ್ತಪಡಿಸಿದರು.ಶಾಲೆಯ ಜಾಗದ ತಕರಾರು ಇರುವುದರಿಂದ ಫೆ. 5ರಂದು ಕಲಕುಂಡಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌, ಗ್ರಾಮಸ್ಥರು, ಕೃಷ್ಣಪ್ಪ ತಾಂಬೆ ಮನೆಯವರು, ಗ್ರಾಪಂ ಅಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಮನವೊಲಿಕೆಗೆ ಯತ್ನಿಸಲಾಗುವುದು. 1958ರಲ್ಲಿಯೇ ಶಾಲೆಗೆ ಜಾಗ ನೀಡಿರುವುದರಿಂದ ಸರ್ಕಾರದಿಂದ ಇದೀಗ ಪರಿಹಾರ ನೀಡಲು ಬರುವುದಿಲ್ಲ. ಪಂಚಾಯಿತಿಯಿಂದಲೇ ಪರಿಹಾರ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಬಿಇಒ ಉಮಾದೇವಿ ಬಸಾಪುರ ಹೇಳಿದರು.

ನಮ್ಮ ಹಿರಿಯರು ಶಾಲೆಗೆ ದಾನ ನೀಡಿರುವುದು ನಮ್ಮ ಗಮನಕ್ಕೆ ಬಂತು. ಆಗ ಉತ್ತಾರ ಪರಿಶೀಲಿಸಿದಾಗ ನಮ್ಮ ತಂದೆಯವರ ಹೆಸರಿದೆ. ಹೀಗಾಗಿ ಆ ಜಾಗವನ್ನು ನಮಗೆ ಬಿಟ್ಟುಕೊಡಬೇಕು ಅಥವಾ ಪರಿಹಾರ ನೀಡಬೇಕೆಂದು ಕಳೆದ 10 ವರ್ಷದಿಂದ ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಶಾಲೆಗೆ ಬೀಗ ಹಾಕಬೇಕಾಯಿತು ಎಂದು ಜಾಗದ ಮಾಲೀಕ ಕೃಷ್ಣಪ್ಪ ತಾಂಬೆ ಹೇಳಿದರು.