ಸಾರಾಂಶ
- ಬಿಜೆಪಿಯಿಂದ ಕಂಪನಿಗಳಿಗೆ ₹55 ಲಕ್ಷ ಕೋಟಿ ತೆರಿಗೆ ವಿನಾಯಿತಿ: ಆರೋಪ
- ರೈತರು, ಕಾರ್ಮಿಕರು, ಯುವಕರು, ಹಿಂದುಳಿದವರ ಹತ್ತಿಕ್ಕುವ ಕಾರ್ಯ- - - ಕನ್ನಡಪ್ರಭ ವಾರ್ತೆ ಹರಿಹರ
ಕೇವಲ ಧರ್ಮ, ಜಾತಿಯಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಸರ್ಕಾರವು ದೇಶದ ರೈತರು, ಕಾರ್ಮಿಕರು, ಯುವಕರು, ದಲಿತ, ಹಿಂದುಳಿದವರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂದು ತುಮಕೂರಿನ ರೈತ ಮುಖಂಡ ಎನ್.ಜಿ.ರಾಮಚಂದ್ರ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ದೇಶದ ಬಡವರು ಹಾಗೂ ರೈತರು, ಹಿಂದುಳಿದವರ ಅಭಿವೃದ್ಧಿ ಬಗ್ಗೆ ಕೆಲಸ ಮಾಡದೇ, ಕೇವಲ ಧರ್ಮ, ಇತರೆ ಭಾವನಾತ್ಮಕ ವಿಷಯಗಳಲ್ಲಿ ಅವರನ್ನೆಲ್ಲಾ ಹಿಡಿದಿಟ್ಟುಕೊಂಡಿದೆ. ಈ ಷಡ್ಯಂತ್ರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಗತಿಪರರು, ಚಿಂತಕರು ಸೇರಿಕೊಂಡು ಎದ್ದೇಳು ಕರ್ನಾಟಕ ಅಭಿಯಾನವನ್ನು ಆರಂಭಿಸಿದ್ದೇವೆ ಎಂದರು.
ಬಿಜೆಪಿಯ ೧೦ ವರ್ಷಗಳ ಆಡಳಿತದಲ್ಲಿ ಜನಸಾಮಾನ್ಯರ ಬದುಕನ್ನು ರೂಪಿಸಲು ಹೇಳಿಕೊಳ್ಳುವಂಥ ಹೊಸ ಅಭಿವೃದ್ಧಿ ಯೋಜನೆಯನ್ನೂ ನೀಡಿಲ್ಲ, ಜನಸಾಮಾನ್ಯರಿಗೆ ಯಾವ ಸಬ್ಸಿಡಿಯನ್ನೂ ಹೆಚ್ಚಿಸದೇ, ಎಲ್ಲವನ್ನೂ ಕಡಿತಗೊಳಿಸಲಾಗಿದೆ. ಈ ಸಬ್ಸಿಡಿ ಕಡಿತದ ಮೊತ್ತ ಎಲ್ಲಿ ಬಳಕೆ ಮಾಡಲಾಗಿದೆ ಎಂದು ಕೇಳಿದರೆ, ಕೋವಿಡ್ ನಿಭಾವಣೆ ಸಬೂಬನ್ನು ಸಂಘ ಪರಿವಾರದವರು ನೀಡುತ್ತಾರೆ. ಆದರೆ, ಕೋವಿಡ್ ವ್ಯಾಕ್ಸಿನ್ ಯೋಜನೆಗೆ ಬಳಕೆಯಾಗಿದ್ದು ಕೇವಲ ₹೩೭ ಸಾವಿರ ಕೋಟಿ ಮಾತ್ರ ಎಂದರು.ಇನ್ನೊಂದೆಡೆ ಸರ್ಕಾರದ ಖಜಾನೆ ಹಣವನ್ನು ಅವರ ಕಾರ್ಪೋರೇಟ್ ಮಿತ್ರರ ತಿಜೋರಿಗೆ ಸದ್ದಿಲ್ಲದಂತೆ ಹರಿಸಲಾಗಿದೆ. ಈ ೧೦ ವರ್ಷಗಳಲ್ಲಿ ಕಾಪೋರೇಟ್ ಕಂಪನಿಗಳ ₹೫೫ ಲಕ್ಷ ತೆರಿಗೆಗೆ ವಿನಾಯಿತಿ ನೀಡಲಾಗಿದೆ, ₹೩೩ ಲಕ್ಷ ಕೋಟಿಗಳ ಸಬ್ಸಿಡಿ, ಕನಿಷ್ಠ ₹೧೦೦ ಲಕ್ಷ ಕೋಟಿಗಳ ಅಮೂಲ್ಯ ಸರ್ಕಾರಿ ಉದ್ದಿಮೆಗಳನ್ನು ಬಿಡಿಗಾಸಿಗೆ ಹರಾಜು ಮಾಡಲಾಗಿದೆ. ಇದು ಹಗಲು ದರೋಡೆಗೆ ಸಮಾನವಾಗಿದೆ ಎಂದು ಟೀಕಿಸಿದರು.
ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್ ನೋಟದವರ್ ಮಾತನಾಡಿದರು.ರೈತ ಮುಖಂಡ ಕೆ.ಎಚ್. ಆನಂದಮೂರ್ತಿ, ಅಪ್ಪಾ ಸಾಹೇಬ್, ಗೋಣಿ ಬಸಪ್ಪ, ಹೊನ್ನಪ್ಪ ಮರಿಯಪ್ಪನವರ್, ದಲಿತ ಮುಖಂಡ ಮಂಜುನಾಥ, ಮಾನವ ಬಂಧುತ್ವ ವೇದಿಕೆಯ ಮಂಜುನಾಥ್, ಇಕ್ಬಾಲ್, ಕೃಷ್ಣಪ್ಪ ಇತರರು ಹಾಜರಿದ್ದರು.
- - - -೯ಎಚ್‌ಆರ್‌ಆರ್೧:ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡ ಎನ್.ಜಿ.ರಾಮಚಂದ್ರ ಮಾತನಾಡಿದರು.