ಊರೂರು ಅಲೆಯದೆ ಸರ್ಕಾರಿ ಸೌಲಭ್ಯ ಪಡೆದು ಸುಶಿಕ್ಷಿತರಾಗಿ: ಜಿ.ಪಲ್ಲವಿ

| Published : May 01 2025, 12:49 AM IST

ಊರೂರು ಅಲೆಯದೆ ಸರ್ಕಾರಿ ಸೌಲಭ್ಯ ಪಡೆದು ಸುಶಿಕ್ಷಿತರಾಗಿ: ಜಿ.ಪಲ್ಲವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಿಂಧೋಳ್ ಜನಾಂಗ ಈ ಗ್ರಾಮದಲ್ಲಿದೆ. ಮಾರಮ್ಮ ದೇವರನ್ನು ಹೊತ್ತುಕೊಂಡು ಚಾವಟಿಯಲ್ಲಿ ಹೊಡೆದುಕೊಳ್ಳುವ ಪದ್ಧತಿ, ಭಿಕ್ಷಾಟನೆ ಬಿಟ್ಟು ಒಂದೆಡೆ ನೆಲೆಸಿ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಯಾವುದೇ ಆಧಾರವಿಲ್ಲದೆ ಸಮುದಾಯದವರಿಗೆ 2 ಲಕ್ಷ ರು.ಗಳವರೆಗೆ ಸಹಾಯಧನವಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಅಲೆಮಾರಿ ಜನಾಂಗ ಜನರು ಊರೂರು ಅಲೆಯದೆ ಸರ್ಕಾರಿ ಸೌಲಭ್ಯ ಪಡೆದು ಒಂದೆಡೆ ನೆಲೆಸಿ ಸುಶಿಕ್ಷಿತರಾಗಿ ಬದುಕು ನಡೆಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.

ಹೋಬಳಿಯ ಕೃಷ್ಣಾಪುರ ಗ್ರಾಮದ ಪರಿಶಿಷ್ಟ ಜಾತಿ ಸಿಂಧೋಳ್ ವರ್ಗದ ಕುಟುಂಬಗಳು ನೆಲೆಸಿರುವ ಮನೆ, ಜೋಪಡಿಗಳನ್ನು ವೀಕ್ಷಿಸಿ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಅಲೆಮಾರಿ ಜನಾಂಗವನ್ನು ತರಲು ಸರ್ಕಾರ ಹತ್ತಾರು ಸೌಲಭ್ಯ ಕಲ್ಪಿಸಲು ನಿಗಮ ಸ್ಥಾಪಿಸಿದೆ ಎಂದರು.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಿಂಧೋಳ್ ಜನಾಂಗ ಈ ಗ್ರಾಮದಲ್ಲಿದೆ. ಮಾರಮ್ಮ ದೇವರನ್ನು ಹೊತ್ತುಕೊಂಡು ಚಾವಟಿಯಲ್ಲಿ ಹೊಡೆದುಕೊಳ್ಳುವ ಪದ್ಧತಿ, ಭಿಕ್ಷಾಟನೆ ಬಿಟ್ಟು ಒಂದೆಡೆ ನೆಲೆಸಿ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಕಿವಿಮಾತು ಹೇಳಿದರು.

ಯಾವುದೇ ಆಧಾರವಿಲ್ಲದೆ ಸಮುದಾಯದವರಿಗೆ 2 ಲಕ್ಷ ರು.ಗಳವರೆಗೆ ಸಹಾಯಧನವಿದೆ. ಹೆಣ್ಣು ಮಕ್ಕಳಿಗೆ ಕೃಷಿಗಾಗಿ 2 ಎಕರೆ ಭೂಮಿ, ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಕೊಳವೆ ಬಾವಿ ಸೌಲಭ್ಯವಿದೆ. ಸರ್ಕಾರದ ಸೌಲಭ್ಯ ಪಡೆಯುವುದು ತಮ್ಮಹಕ್ಕು ಎಂದರು.

ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಬಾಲ್ಯವಿವಾಹದಂತಹ ಪ್ರಕರಣಕ್ಕೆ ಮುಂದಾದರೆ ಪೋಕ್ಸೋ ಕಾಯ್ಕೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ ಪಲ್ಲವಿ, ಕೇವಲ ಭಾಷಣಕ್ಕೆ ಸೀಮಿತವಾಗದೆ ನೊಂದವರ ಸಮಸ್ಯೆ ಆಲಿಸಿ ಪರಿಹರಿಸಲು ಬಂದಿರುವೆ ಎಂದರು.

ಒಂದು ತಿಂಗಳೊಳಗೆ ಈ ಸಮುದಾಯದವರ ಎಲ್ಲ ಸಮಸ್ಯೆ ಪರಿಹಾರವಾಗಬೇಕು. ಪಡಿತರ ಚೀಟಿ, ಸೂರಿಲ್ಲದವರನ್ನು ಗುರ್ತಿಸಿ ಸೂಕ್ತ ನಿವೇಶನ, ಜಾತಿ ಪ್ರಮಾಣ ಪತ್ರ, ವಿದ್ಯುತ್, ಕುಡಿಯುವ ನೀರು, ಸ್ಮಶಾನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಖಡಕ್‌ ಆದೇಶ ನೀಡಿದರು.

ಸಿಂಧೋಳ್ ಸಮುದಾಯದ ಪ್ರತಿನಿಧಿಯಾಗಿ ನಾರಾಯಣಸ್ವಾಮಿ ಮಾತನಾಡಿ, ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಹಲವರಿಗೆ ಸಿಂಧೋಳ್ ಮತ್ತೆ ಕೆಲವರಿಗೆ ಬೇಡ ಎಂಬ ಜಾತಿ ಪತ್ರವಿದೆ. ಶಿಕ್ಷಣ, ಉದ್ಯೋಗ, ಸವಲತ್ತು ಪಡೆಯಲು ಕಷ್ಟವಾಗಿದೆ. ಸಿಂಧೋಳ್ ಎಂದು ಸರಿಪಡಿಸಿಕೊಡಬೇಕು ಎಂದು ಕೋರಿದರು.

ಬಹುತೇಕ ಒಂದು ಸೂರಿನಲ್ಲಿ ನಾಲ್ಕೈದು ಕುಟುಂಬಗಳಿವೆ. ಪ್ರತ್ಯೇಕವಾಗಿ ನೆಲೆಸಲು ಸೂರಿಗೆ ಒಂದಿಷ್ಟು ಜಾಗಕೊಡಬೇಕು. ಪಡಿತರ ಚೀಟಿ ಇಲ್ಲ. ಕೃಷಿ ಗೊತ್ತಿರುವವರಿಗೆ ಬದುಕು ಕಟ್ಟಿಕೊಳ್ಳಲು ಕೃಷಿ ಭೂಮಿ ಕೊಡಿಸಬೇಕು. ಅಂತ್ಯ ಸಂಸ್ಕಾರ ಮಾಡಲು ಇರುವ ಸ್ಮಶಾನದ ಜಾಗ ಒತ್ತುವರಿಯಾಗಿದೆ. ತೆರವುಗೊಳಿಸಬೇಕು. ಕುಡಿಯಲು ಸಮರ್ಪಕ ನೀರು, ವಿದ್ಯುತ್, ರಸ್ತೆ, ಒಳಚರಂಡಿ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷೆ ಜಿ. ಪಲ್ಲವಿ ಒಂದು ತಿಂಗಳೊಳಗೆ ಈ ಸಮುದಾಯದವರ ಎಲ್ಲ ಸಮಸ್ಯೆ ಪರಿಹಾರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳ ಓದಿಗೆ ಕತ್ತರಿ ಹಾಕಿದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಜನರಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಅಧ್ಯಕ್ಷೆ ಜಿ. ಪಲ್ಲವಿ ಅವರಿಗೆ ಸಮುದಾಯದ ಸಾಂಪ್ರಾದಾಯಿಕ ಪದ್ಧತಿಯಂತೆ ಗೌರವ ಸಮರ್ಪಣೆ ಅರ್ಪಿಸಿದರು. ಫಲ ತಾಂಬೂಲ, ಬಾಗಿನದೊಂದಿಗೆ ಉಡಿ ತುಂಬಿ ಸಂಭ್ರಮಿಸಿದರು.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಆಪ್ತ ಕಾರ್ಯದರ್ಶಿ ಅನಂದಕುಮಾರ್ ಏಕಲವ್ಯ, ಸಮಾಜಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಸಿದ್ದಲಿಂಗೇಶ್, ತಾಲೂಕು ಸಹಾಯಕ ನಿರ್ದೇಶಕ ದಿವಾಕರ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಯು.ಎಸ್. ಅಶೋಕ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸುಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅರುಣ್‌ಕುಮಾರ್, ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ನರೇಂದ್ರಸ್ವಾಮಿ, ಇನ್ಸ್ ಪೆಕ್ಟರ್ ಸುಮಾರಾಣಿ, ಚೌಡೇನಹಳ್ಳಿ ಗ್ರಾಪಂ ಅಧ್ಯಕ್ಷೆ ಧನಲಕ್ಮೀ, ಶಿಕ್ಷಕ ರಮೇಶ್, ರೈತ ಸಂಘದ ನಾರಾಯಣಸ್ವಾಮಿ, ಸಮುದಾಯದ ಮುಖಂಡರು ಇದ್ದರು.