ಸಾರಾಂಶ
ಶಿರಹಟ್ಟಿ: ಕಣ್ಣುಗಳು ಮಾನವ ದೇಹದ ಪಂಚೇಂದ್ರಿಯಗಳ ಪೈಕಿ ತೀರಾ ಪ್ರಾಮುಖ್ಯತೆ ಪಡೆದ ಸೂಕ್ಷ್ಮ ಅಂಗ. ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹು ಮುಖ್ಯ. ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು ಎಂದು ಬೆಳ್ಳಟ್ಟಿ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹೇಳಿದರು.ಶಿವಮೊಗ್ಗದ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ, ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮ, ತಾಲೂಕು ವೈದ್ಯಾಧಿಕಾರಿಗಳ ಸಂಘ, ತಿಮ್ಮರಡ್ಡಿ ಮರಡ್ಡಿ ಸ್ನೇಹ ಬಳಗ, ಬೆಳ್ಳಟ್ಟಿ ಪ್ರಜಾ ಚೈತನ್ಯ ಫೌಂಡೇಶನ್ ಆಶ್ರಯದಲ್ಲಿ ಹನುಮರಡ್ಡಿ ಸೋಮರಡ್ಡಿ ಮರಡ್ಡಿ ಇವರ ಸ್ಮರಣಾರ್ಥವಾಗಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವೈದ್ಯರು ಶೇ. ೨೫ರಷ್ಟು ಪ್ರಯತ್ನ ಮಾಡಿರುತ್ತಾರೆ. ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ನಂತರ ರೋಗಿಗಳು ಧೂಳು, ಬಿಸಿಲು ಬಡಿಯದಂತೆ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು. ಪೌಷ್ಟಿಕ ಸಮತೋಲನದ ಆಹಾರ ಸೇವಿಸಬೇಕು ಎಂದರು. ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಹಿರಿಯರಿಗೆ ಮಕ್ಕಳು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ ಬದ್ದರಾಗಿರಬೇಕು ಎಂದು ತಿಳಿಸಿದರು. ಮನುಷ್ಯನ ಪ್ರಮುಖ ಅಂಗ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ನಾವು ಎಲ್ಲ ರಂಗದಲ್ಲಿಯೂ ಅಭಿವೃದ್ದಿ ಹೊಂದಲು ಸಾಧ್ಯ. ಇಂದಿನ ಒತ್ತಡದ ಜೀವನ ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರಿತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ೨-೩ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ಬಿಜೆಪಿ ಮುಖಂಡ ನಾಗರಾಜ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹದ ಆರೋಗ್ಯ ರಕ್ಷಣೆಯ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮಿವಾದ ಅಂಗ ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಬಡಜನರಿಗೆ ಉಚಿತ ನೇತ್ರ ತಪಾಸಣಾ ಶಿಬಿರಗಳು ಅನುಕೂಲವಾಗಿವೆ. ಕಣ್ಣಿಗೆ ಬಹಳ ಆಯಾಸ ಉಂಟು ಮಾಡುವ ಬದಲು ಅದರ ಸುರಕ್ಷತೆಗೆ ಕಾಳಜಿ ತೆಗೆದುಕೊಳ್ಳಬೇಕು. ಶಿಬಿರದಲ್ಲಿ ಉತ್ತಮ ಗುಣಮಟ್ಟದ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದ್ದು, ಆರೋಗ್ಯದ ಮಹತ್ವ ಗೊತ್ತಾಗುವುದು ನಮ್ಮ ಆರೋಗ್ಯ ಕೆಟ್ಟಾಗ ಮಾತ್ರ ಆಗಬಾರದು. ೪೦ ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಎರಡು ವರ್ಷಕ್ಕೊಮ್ಮೆ ನೇತ್ರ ತಜ್ಞರನ್ನು ಸಂದರ್ಶಿಸಿ ಪರೀಕ್ಷಿಸಿಕೊಳ್ಳಬೇಕು. ಕಣ್ಣಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಅತಿಯಾದ ಮೊಬೈಲ್ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಕಣ್ಣುಗಳು ಬಾಹ್ಯ ಪ್ರಪಂಚಕ್ಕೆ ನಮಗಿರುವ ಕೊಂಡಿ. ಅವುಗಳ ಮಹತ್ವ ಅಷ್ಟೇ ಅಲ್ಲ, ಅವು ನಮ್ಮ ದೇಹದೊಳಗಿನ ಗುಟ್ಟನ್ನೂ ಬಿಟ್ಟುಕೊಡುತ್ತವೆ. ಕಣ್ಣುಗಳಲ್ಲಾಗುವ ಬದಲಾವಣೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಎಷ್ಟು ಬೇಗ ಈ ಲಕ್ಷಣಗಳನ್ನು ಗುರುತಿಸುತ್ತೇವೋ ಅಷ್ಟು ನಮಗೆ ಒಳ್ಳೆಯದು ಎಂದರು. ಪುಟ್ಟಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಮೋಹನ ಗುತ್ತೆಮ್ಮನವರ, ಕೊಟ್ರೆಶ ಸಜ್ಜನರ, ಮಹೇಶ ಬಡ್ನಿ, ಸುರೇಶ ಬೆಲಹುಣಶಿ, ಹೇಮಂತರೆಡ್ಡಿ ಅಳವಂಡಿ, ಯಲ್ಲಪ್ಪ ಒಳಗೇರಿ, ಗಿರೀಶ್ ರೆಡ್ಡಿ ಮೇಕಳಿ, ವೆಂಕಣ್ಣ ಡಂಬಳ, ವೆಂಕಟೇಶ ಬಸವರೆಡ್ಡಿ, ವಿಶ್ವನಾಥ ದಲಾಲಿ, ರಾಜೀವ ಮಾಂಡ್ರೆ, ಪರಸರಡ್ಡಿ ಮರಡ್ಡಿ, ಮಂಜುನಾಥ ಮಾಚೇನಹಳ್ಳಿ, ಪರಮೇಶಪ್ಪ ಕೋಡಿಹಳ್ಳಿ, ಯಲ್ಲನಗೌಡ ಪಾಟೀಲ, ಶ್ರೀನಿವಾಸ ಮರಡ್ಡಿ, ಸುರೇಶ್ ಬೇಂದ್ರೆ, ಅಶೋಕ ಬಾವನೂರ, ಪರಮೇಶಪ್ಪ ಬೂದಿಹಾಳ, ಸುನಿಲ ಬಣಗಾರ, ಚನ್ನವೀರಪ್ಪ ಸಜ್ಜನರ ಉಪಸ್ಥಿತರಿದ್ದರು.