ಸಾರಾಂಶ
ಎಚ್‌ಪಿವಿ ಲಸಿಕೆ ಪಡೆಯುವ ಮೂಲಕ ಗರ್ಭ ಕಂಠದ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಬಹುದು ಎಂದು ಜಿಪಮ ಸಿಇಒ ಮೋನಾರೋತ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಎಚ್‌ಪಿವಿ ಲಸಿಕೆ ಪಡೆಯುವ ಮೂಲಕ ಗರ್ಭ ಕಂಠದ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಬಹುದು ಎಂದು ಜಿಪಮ ಸಿಇಒ ಮೋನಾರೋತ್ ಹೇಳಿದರು.ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಡೆದ ಎಚ್‌ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು, ಪ್ರಾರಂಭಿಕ ಅರಿವು, ನಿರಂತರ ತಪಾಸಣೆ ಮತ್ತು ಲಸಿಕೆ ತೆಗದುಕೊಳ್ಳುವಂತಹ ಮುಂಜಾಗ್ರತಾ ಕ್ರಮಗಳಿಂದ ಪ್ರತಿ ವ್ಯಕ್ತಿಯನ್ನು ಕ್ಯಾನ್ಸರ್‌ನಿಂದ ರಕ್ಷಿಸಬಹುದು. ಈ ಎಲ್ಲ ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಡಾ.ವಿದ್ಯಾ ಸಾಗರ್ ಮಾತನಾಡಿ, 9ರಿಂದ 14 ವರ್ಷದ ಬಾಲಕರು ಮತ್ತು ಬಾಲಕಿಯರು ಇಬ್ಬರೂ ಲಸಿಕೆ ತೆಗೆದುಕೊಂಡಾಗ ರೋಗ ನಿಯಂತ್ರಣ ಪರಿಪೂರ್ಣವಾಗುತ್ತದೆ. ಲಸಿಕೆ ತೆಗೆದುಕೊಂಡರೂ ತಪಾಸಣೆ ಮಾಡಿಸುವುದನ್ನು ನಿಲ್ಲಿಸಬಾರದು. ಲಸಿಕೆ ತೆಗೆದುಕೊಳ್ಳುವಷ್ಟೇ ತಪಾಸಣೆಯೂ ಮುಖ್ಯವಾಗಿದೆ ಎಂದರು.ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ದೇಶದಲ್ಲಿ ನಿತ್ಯ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ಕ್ಯಾನ್ಸರ್‌ನಿಂದ ವಾರ್ಷಿಕವಾಗಿ ಸಾವಿರಕ್ಕೂ ಹೆಚ್ಚಿನ ಮಂದಿ ಮೃತಪಡುತ್ತಿದ್ದಾರೆ. ಆಗಾಗಿ ವಿದ್ಯಾರ್ಥಿಗಳು ಎಚ್‌ಪಿವಿ ಲಸಿಕ ಪಡೆದರೆ ಕ್ಯಾನ್ಸರ್‌ನಿಂದ ದೂರವಿರಬಹುದು ಎಂದರು.
ಜೆಎಸ್ಎಸ್ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಎಚ್.ಎಂ.ಉಮೇಶ್, ಜೆಎಸ್ಎಸ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಿಕಾಸ್ ನಂದಿ, ನರ್ಸಿಂಗ್ ಸೂಪರ್ ವೈಸರ್ ಎಸ್. ರವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.