ಸಾರಾಂಶ
ರಾಜ್ಯಮಟ್ಟದ ಗಡಿನಾಡು ಕನ್ನಡ ಉತ್ಸವ ಆಚರಣೆಯನ್ನು ಫೆ.10 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಕಾರ್ಯಕ್ರಮದ ನಿರ್ವಹಣೆಗೆ ಅಗತ್ಯವಾಗಿರುವ ಸಿದ್ಧತೆ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯಮಟ್ಟದ ಗಡಿನಾಡು ಕನ್ನಡ ಉತ್ಸವ ಆಚರಣೆಯನ್ನು ಫೆ.10 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಕಾರ್ಯಕ್ರಮದ ನಿರ್ವಹಣೆಗೆ ಅಗತ್ಯವಾಗಿರುವ ಸಿದ್ಧತೆ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಡಿನಾಡು ಕನ್ನಡ ಉತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಡಿನಾಡು ಕನ್ನಡ ಉತ್ಸವವನ್ನು ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘ, ಜಿಲ್ಲಾ ಶಾಖೆ ಹಾಗೂ ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಉಂಟಾಗದಂತೆ ಯಶಸ್ಸಿಗೆ ಸಕಲ ಸಿದ್ಧತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಬಯಲು ರಂಗಮಂದಿರಲ್ಲಿ ಕಾರ್ಯಕ್ರಮ ನಡೆಯಲಿದ್ದು, ಉತ್ಸವದ ಅಂಗವಾಗಿ ಕನ್ನಡ ಜಾಗೃತಿ ಜಾಥಾ, ಜಾನಪದ ಕಲಾ ಪ್ರಕಾರಗಳ ಮೆರವಣಿಗೆ ಹಾಗೂ ಸಾಂಸ್ಕೃತಿಕ ನಡಿಗೆ, ವಿಶೇಷ ಉಪನ್ಯಾಸ, ಕವಿಗೋಷ್ಠಿ, ಗಡಿನಾಡು ಕನ್ನಡ ಸಂಗೀತೋತ್ಸವ ಸೇರಿದಂತೆ ಕನ್ನಡ ನಾಡು, ನುಡಿ, ಸಂಸ್ಕೃತಿ ಪಸರಿಸುವ ಹಲವು ವಿಶಿಷ್ಠ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಗಡಿನಾಡು ಕನ್ನಡ ಉತ್ಸವ ದಿನದಂದು ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಇಂಡಿಗನತ್ತ ಗ್ರಾಮದ ಶಾಲೆಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ 1 ಲಕ್ಷ ರು.ಗಳನ್ನು ಶಾಲಾಭಿವೃದ್ಧಿಗೆ ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ. ವಿವಿಧ ಕಲಾತಂಡಗಳೊಂದಿಗೆ ಆಕರ್ಷಕ ಕನ್ನಡ ಜಾಗೃತಿ ಜಾಥಾ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಹೆಸರಾಂತ ಚಲನಚಿತ್ರ ಗಾಯಕರು, ಸರಿಗಮಪ ತಂಡದವರಿಂದ ಕನ್ನಡ ಸಂಗೀತೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಜನಪ್ರತಿನಿಧಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಎಲ್ಲಾ ಜಿಲ್ಲೆಗಳ ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಆಗಮಿಸಲಿದ್ದು, ಊಟ, ವಸತಿ, ಸ್ವಚ್ಚತೆ, ಕುಡಿಯುವ ನೀರು, ವಾಹನ ವ್ಯವಸ್ಥೆ, ವಿದ್ಯುತ್, ಇನ್ನಿತರ ಸೌಲಭ್ಯಗಳು ಸಮರ್ಪಕವಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಸೂಚನೆ ನೀಡಿದರು. ಪ್ರಸ್ತುತ 2023-24ನೇ ಸಾಲಿನ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮ ಆಯೋಜನೆ ಅವಕಾಶ ಚಾಮರಾಜನಗರ ಜಿಲ್ಲೆಗೆ ಲಭಿಸಿದೆ. ರಾಜ್ಯದ ಗಡಿನಾಡು ಪ್ರದೇಶಗಳಲ್ಲಿ ಕನ್ನಡದ ಕಲೆ, ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವಲ್ಲಿ ಸಂಘವು ಕ್ರಿಯಾಶೀಲವಾಗಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು.ಎಡಿಸಿ ಗೀತಾ ಹುಡೇದ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶೈಲಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಮಹದೇವಯ್ಯ, ಸಂಘದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.