ಸಾರಾಂಶ
- ಕೋರ್ಟ್ ಮೆಟ್ಟಿಲೇರೋಕೂ ಸಿದ್ಧ: ಪುರಂದರ ಎಚ್ಚರಿಕೆ । ಶಾಸಕರು, ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ತಾಲೂಕಿನ ಅತಿ ದೊಡ್ಡ ಗ್ರಾಮಗಳಲ್ಲೊಂದಾದ ಲೋಕಿಕೆರೆ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಸಾಕಷ್ಟು ಸಲ ಮನವಿ ಮಾಡಿದ್ದೇವೆ. ಆದರೂ, ಸ್ಪಂದಿಸದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಗ್ರಾಮಕ್ಕೆ ಬರುವ ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ಘೇರಾವ್ ಮಾಡಬೇಕಾಗುತ್ತದೆ ಎಂದು ಗ್ರಾಮ ಮುಖಂಡ, ಸಾಮಾಜಿಕ ಕಾರ್ಯಕರ್ತ ಪುರಂದರ ಲೋಕಿಕೆರೆ ಎಚ್ಚರಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಲೋಕಿಕೆರೆ ಗ್ರಾಮಕ್ಕೆ ಹೋಬಳಿ ಕೇಂದ್ರವಾಗುವ ಎಲ್ಲ ಅರ್ಹತೆಗಳಿವೆ. ಸುತ್ತಲಿನ ಹತ್ತಾರು ಗ್ರಾಮಗಳು ಲೋಕಿಕೆರೆಯನ್ನೇ ಅವಲಂಬಿಸಿವೆ. ಅಟಲ್‌ಜೀ ಸೇವಾ ಕೇಂದ್ರದಲ್ಲಿ ಉಪ ತಹಸೀಲ್ದಾರ್, ಸಿಬ್ಬಂದಿಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯರ ಕೊರತೆ ಇದೆ. ಆಂಬ್ಯುಲೆನ್ಸ್ ಸೌಲಭ್ಯ ಇಲ್ಲ. ಶವಾಗಾರ ಕಟ್ಟಡವಿದ್ದರೂ ಮರಣೋತ್ತರ ಪರೀಕ್ಷೆಗೆ ವೈದ್ಯರಿಲ್ಲದ ಕಾರಣ ಶವಗಳನ್ನು ಜಿಲ್ಲಾಸ್ಪತ್ರೆಗೇ ಸಾಗಿಸಬೇಕಾದ ದುಸ್ಥಿತಿ ಇದೆ ಎಂದು ಕಿಡಿಕಾರಿದರು.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಸೊಳ್ಳೆಗಳಿಂದ ಹರಡುವ ರೋಗಗಳು, ಸಾಂಕ್ರಾಮಿಕ ಕಾಯಿಲೆಯಿಂದಾಗಿ ಅನೇಕರು ಬಲಿಯಾಗುತ್ತಿದ್ದಾರೆ. ಸೂಕ್ತ ರಸ್ತೆ, ಚರಂಡಿ ಇಲ್ಲದೇ ತೊಂದರೆಯಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇಡೀ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮ ಅಭಿವೃದ್ಧಿಗೆ ಶಾಸಕರು, ಜಿಪಂ ಅಧಿಕಾರಿಗಳಿಗೆ ನೀಡಿದ ಮನವಿಗಳಿಗೆ ಸುಳ್ಳು ಭರವಸೆ ಮಾತ್ರ ಸಿಕ್ಕಿದೆ ಎಂದರು.ಲೋಕಿಕೆರೆ ಗ್ರಾಮಕ್ಕೆ 2 ವರ್ಷದಿಂದಲೂ ಶುದ್ಧ ಕುಡಿಯುವ ನೀರು ಪೂರೈಸಿಲ್ಲ. ಈಗ ಗ್ರಾಪಂನಿಂದ ಪೂರೈಸುವ ನೀರಿನಲ್ಲಿ ಹುಳುಗಳಿದ್ದು, ಅದೇ ನೀರನ್ನು ಜನರು ಕಾಯಿಸಿ, ಸೋಸಿ ಕುಡಿಯಬೇಕಾದ ಅನಿವಾರ್ಯತೆ ಇದೆ. ಜಲಜೀವನ್ ಮಿಷನ್ ಯೋಜನೆಯಡಿ ಕೋಟ್ಯಂತರ ರು.ಗಳ ಅವ್ಯವಹಾರ ನಡೆದಿದೆ. ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಾಯಕೊಂಡ ಶಾಸಕರು, ಜಿಪಂ ಸಿಇಒ, ಆರೋಗ್ಯ ಇಲಾಖೆ, ಕಂದಾಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಾಸಕರು, ಅಧಿಕಾರಿಗಳಿಗೆ ಘೇರಾವ್ ಹಾಕುವುದಷ್ಟೇ ಅಲ್ಲ, ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಎಸ್.ಎಸ್. ನಾಗಪ್ಪ, ಆರ್.ರಾಮಸ್ವಾಮಿ, ಪೆರಿಯಾರ್ ಮಂಜುನಾಥ, ರುದ್ರಪ್ಪ ಇತರರು ಇದ್ದರು.- - - -25ಕೆಡಿವಿಜಿ2: ದಾವಣಗೆರೆಯಲ್ಲಿ ಶುಕ್ರವಾರ ಲೋಕಿಕೆರೆ ಗ್ರಾಮದ ಮುಖಂಡ, ಸಾಮಾಜಿಕ ಕಾರ್ಯಕರ್ತ ಪುರಂದರ ಲೋಕಿಕೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.