ಹಬ್ಬದಂತೆ ಕಳೆಕಟ್ಟಿದ ಗಿಡ್ಡೇನಹಳ್ಳಿ ಸರ್ಕಾರಿ ಶಾಲೆ ಅಮೃತ ಮಹೋತ್ಸವ

| Published : Feb 21 2025, 12:46 AM IST

ಹಬ್ಬದಂತೆ ಕಳೆಕಟ್ಟಿದ ಗಿಡ್ಡೇನಹಳ್ಳಿ ಸರ್ಕಾರಿ ಶಾಲೆ ಅಮೃತ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಗ್ರಾಮೀಣ ಶೈಲಿಯ ವೇಷಭೂಷಣದಲ್ಲಿ ನಲಿದಾಡಿದ ಪುಟಾಣಿ ಮಕ್ಕಳು, ಏಕ ಪಾತ್ರಾಭಿನಯ, ನಾಟಕ, ವಿವಿಧ ಸ್ಫರ್ಧೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಭ್ರಮ, ಇಡೀ ಗ್ರಾಮವೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿ ಹಬ್ಬದಂತೆ ಆಚರಣೆಗೊಂಡು ಋಷಿಪಟ್ಟಿದ್ದು ತಾಲೂಕಿನ ಗಿಡ್ಡೇನಹಳ್ಳಿ ಸರ್ಕಾರಿ ಶಾಲೆ ಅಮೃತ ಮಹೋತ್ಸವದಲ್ಲಿ ಕಂಡುಬಂತು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೭೫ನೇ ವರ್ಷದ ಅಮೃತ ಮಹೋತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗ್ರಾಮೀಣ ಶೈಲಿಯ ವೇಷಭೂಷಣದಲ್ಲಿ ನಲಿದಾಡಿದ ಪುಟಾಣಿ ಮಕ್ಕಳು, ಏಕ ಪಾತ್ರಾಭಿನಯ, ನಾಟಕ, ವಿವಿಧ ಸ್ಫರ್ಧೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಭ್ರಮ, ಇಡೀ ಗ್ರಾಮವೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿ ಹಬ್ಬದಂತೆ ಆಚರಣೆಗೊಂಡು ಋಷಿಪಟ್ಟಿದ್ದು ತಾಲೂಕಿನ ಗಿಡ್ಡೇನಹಳ್ಳಿ ಸರ್ಕಾರಿ ಶಾಲೆ ಅಮೃತ ಮಹೋತ್ಸವದಲ್ಲಿ ಕಂಡುಬಂತು.ತಾಲೂಕಿನ ಅಂಬಳೆ ಹೋಬಳಿ ಗಿಡ್ಡೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೭೫ನೇ ವರ್ಷ ದ ಅಮೃತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘ, ಗ್ರಾ.ಪಂ. ಮಾಜಿ ಅಧ್ಯಕ್ಷ, ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಸೇವೆ ಗೈದು ನಿವೃತ್ತ ಗೊಂಡ ಶಿಕ್ಷಕರಿಗೆ ಅಭಿನಂದಿಸಿದ ಕ್ಷಣ ಗ್ರಾಮಾದ್ಯಂತ ಸಂಭ್ರ ಮದಿಂದ ವ್ಯಕ್ತವಾಯಿತು.ಶಾಲೆ ವಿದ್ಯಾರ್ಥಿಗಳು ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತ್ರ ಧರಿಸಿಕೊಂಡು ಶಾಲೆಯಿಂದ ಪವಿತ್ರ ಕಳಸ ಹೊತ್ತುಕೊಂಡು ವೇದಿಕೆಯತ್ತ ಆಗಮಿಸಿದರು. ಒಬ್ಬರಂತೆ ಕಳಸವನ್ನು ವೇದಿಕೆ ಮುಂಭಾಗದಲ್ಲಿ ಇರಿಸಿ, ಗ್ರಾಮೀಣ ಸೊಗಡಿನ ಅನೇಕ ಗೀತೆಗಳಿಗೆ ನೃತ್ಯಗೈದು ನೆರೆದಿದ್ದ ಸಭಿಕರು ಹಾಗೂ ಗ್ರಾಮಸ್ಥರ ಮನ ಸಂತೋಷಪಡಿಸಿದರು.ಅಮೃತ ಮಹೋತ್ಸವಕ್ಕೂ ಮುನ್ನ ಹಳೇ ವಿದ್ಯಾರ್ಥಿಗಳಿಗೆ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ, ಮ್ಯೂಸಿಕ ಲ್ ಚೇರ್, ಜೋಡಿಕಾಲಿನ ಓಟ, ವಾಲಿ ಬಾಲ್, ಕಬ್ಬಡ್ಡಿ, ಕ್ರಿಕೇಟ್ ಆಟೋಟದಲ್ಲಿ ಹಳೇ ವಿದ್ಯಾರ್ಥಿಗಳು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರೆ, ಇನ್ನೊಂದೆಡೆ ಮಹಿಳೆಯರು ಶಾಲಾ ದಿನಗಳಲ್ಲಿ ಕಳೆದಂಥ ಸವಿ ಕ್ಷಣವನ್ನು ಸ್ಮರಿಸಿ ಖುಷಿಪಟ್ಟರು.ವೇದಿಕೆ ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಮಾರು ೩೦ ಕ್ಕೂ ಹೆಚ್ಚು ಹಿರಿಯ ಶಿಕ್ಷಕರಿಗೆ ವಿದ್ಯಾರ್ಥಿ ಸಂಘದಿಂದ ಆತ್ಮೀಯವಾಗಿ ಗೌರವಿಸಲಾಯಿತು. ಕೆಲವು ವಿದ್ಯಾರ್ಥಿ ಗಳು ನಿವೃತ್ತ ಶಿಕ್ಷಕರ ಜೊತೆಗೆ ಸೆಲ್ಪಿ ತೆಗೆಸಿದರೆ, ಇನ್ನೊಂದೆಡೆ ಪಾದಸ್ಪರ್ಶಿ ನಮಸ್ಕಾರ ಹಾಗೂ ಪ್ರೀತಿಯ ಅಪ್ಪುಗೆ ನೀಡಿದರು. ಶಿಕ್ಷಕರು ಕೂಡಾ ಪ್ರೀತಿ ವಿದ್ಯಾರ್ಥಿಗಳನ್ನು ನೆನೆದು ಆನಂದಿಸಿದರು.ಅಮೃತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಜಯಂತಿ ರಾಜೇಗೌಡ ಗ್ರಾಮದ ಶಾಲೆಯಲ್ಲಿ ಕಲಿಕೆ ಪಡೆದಿರುವ ನೆನಪಿಗೆ ಶಾಲೆಗೆ ಗೇಟ್ ಮತ್ತು ನಾಮಫಲಕವನ್ನು ವೈಯಕ್ತಿಕ ಖರ್ಚಿನಲ್ಲಿ ಅಳವಡಿಸಿ ತಮ್ಮದೊಂದು ಸಣ್ಣ ಕೊಡುಗೆ ಓದಿದ ಶಾಲೆಗೆ ನೀಡಲಾಗಿದೆ ಎಂದು ತಿಳಿಸಿದರು.ಅಲ್ಲದೇ ಗ್ರಾ.ಪಂ. ಅಧ್ಯಕ್ಷರಾಗಿ ಗಿಡ್ಡೇನಹಳ್ಳಿ ಗ್ರಾಮದ ನಿವಾಸಿಗಳ ಮೂಲಭೂತ ಸೌಕರ್ಯಕ್ಕೆ ಪ್ರಾಮಾ ಣಿಕವಾಗಿ ಸ್ಪಂದಿಸುತ್ತಿದ್ದೇನೆ. ಅಂಬೇಡ್ಕರ್ ಸಂವಿಧಾನದಂತೆ ಗ್ರಾಪಂನ ಸವಲತ್ತುಗಳನ್ನು ತಾರತಮ್ಯವೆಸ ಗದೇ, ಪಕ್ಷಾತೀತವಾಗಿ ಗ್ರಾಮಗಳ ಏಳಿಗೆಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಶಾಲೆ ಮುಖ್ಯೋಪಾಧ್ಯಯಿನಿ ಸುಧಾ ಮಾತನಾಡಿ ಗಿಡ್ಡೇನಹಳ್ಳಿ ಶಾಲೆ ಅತ್ಯಂತ ಪುರಾತನವಾದದು. ಸ್ವಾತಂತ್ರ್ಯ ಪೂರ್ವದಲ್ಲಿ ಜನ್ಮವಿತ್ತ ಶಾಲೆ, ಅಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮರದಡಿ ಭೋಧಿಸಲಾಗುತ್ತಿತ್ತು ಎಂಬ ಪ್ರತೀತಿಯಿದೆ. ಇಂದು ಶಾಲೆಯಲ್ಲಿ ವ್ಯಾಸಂಗ ಪೂರೈಸಿದ ಹಲವಾರು ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಗೀ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಸಂಪಾದಿಸಿದ್ದಾರೆ ಎಂದರು.ಗ್ರಾ.ಪಂ ಸದಸ್ಯ ಬಸವರಾಜ್ ಮಾತನಾಡಿ ಮರ್ಲೆ ಗ್ರಾಪಂ ವ್ಯಾಪ್ತಿಯ ಗಿಡ್ಡೇನಹಳ್ಳಿ ಪುಟ್ಟಗ್ರಾಮ ತನ್ನದೇ ವಿಶೇಷತೆ ಹೊಂದಿದೆ. ಇಂದಿಗೂ ಗ್ರಾಮ ದಲ್ಲಿ ಆಂಗ್ಲಶಾಲೆ ವ್ಯಾಮೋಹಕ್ಕೆ ಒಳಗಾಗದೇ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸಿಸುವ ಮೂಲಕ ಕನ್ನಡ ಶಾಲೆಗಳನ್ನು ಕಳೆದ ಏಳೂವರೆ ದಶಕಗಳಿಂದ ಉಳಿಸಿಕೊಂಡು ಬರುತ್ತಿದೆ ಎಂದು ಹೇಳಿದರು.ಇದೇ ವೇಳೆ ವಿವಿಧ ಸರ್ಕಾರಿ ಉದ್ಯೋದಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮದ ನಾಲ್ಕು ಮಂದಿಗೆ ಹಾಗೂ ವಿವಿಧ ನೃತ್ಯ, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪುಟಾಣಿ ಹಾಗೂ ಇನ್ನಿತರೆ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಆತ್ಮೀಯವಾಗಿ ಗೌರವಿಸಿ, ನೆನಪಿನ ಕಾಣಿಕೆ ನೀಡಲಾ ಯಿತು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ಗ್ರಾಮ ಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.