ಸಾರಾಂಶ
ರಬಕವಿ-ಬನಹಟ್ಟಿ: ಮದುವೆ ಸಮಾರಂಭಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸವಿನೆನಪಿಗಾಗಿ ೨ ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪಂಚಲೋಹದ ರಾಮ, ಲಕ್ಷ್ಮಣ ಸೀತೆ ಹಾಗೂ ಹನುಮಂತನ ಮೂರ್ತಿ ನೀಡಿ ಮದುವೆಗೆ ಆಮಂತ್ರಣ ನೀಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮದುವೆ ಸಮಾರಂಭಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸವಿನೆನಪಿಗಾಗಿ ೨ ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪಂಚಲೋಹದ ರಾಮ, ಲಕ್ಷ್ಮಣ ಸೀತೆ ಹಾಗೂ ಹನುಮಂತನ ಮೂರ್ತಿ ನೀಡಿ ಮದುವೆಗೆ ಆಮಂತ್ರಣ ನೀಡುತ್ತಿದ್ದಾರೆ.ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರ್‌ಎಸ್‌ಎಸ್ ಮುಖಂಡ ಸೋಮನಾಥ ಗೊಂಬಿ ಪುತ್ರಿ ಲಕ್ಷ್ಮೀ ಜೊತೆಗೆ ಯೋಧ ರಬಕವಿಯ ಕಿರಣ ಮಹಾಲಿಂಗಪ್ಪ ಕಳ್ಳಿಗುದ್ದಿ ವಿವಾಹ ಫೆ.19ರಂದು ನಿಶ್ಚಯವಾಗಿದೆ. ಮನೆ ಮನೆಗೆ ಮದುವೆಯ ಆಮಂತ್ರಣ ಜೊತೆ ೨೫೦ ಗ್ರಾಂ ತೂಕದ ಪಂಚಲೋಹದ `ಸಿಯಾ ರಾಮ್’ ಮೂರ್ತಿಯನ್ನು ನೀಡುವ ಮೂಲಕ ಮದುವೆ ಕಾರ್ಯಕ್ರಮ ಸ್ಮರಣೀಯವಾಗಿಸಲು ಹೊರಟಿದ್ದಾರೆ.
ಹಿಂದು ಧರ್ಮದ ಸಂಕೇತವಾಗಿರುವ `ಸಿಯಾ ರಾಮ್’ ಮೂರ್ತಿ ಎಲ್ಲರ ಮನೆಗಳಲ್ಲಿರಬೇಕು. ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣವಾಗಿದ್ದು, ಈ ಸುವರ್ಣ ಸಂದರ್ಭದಲ್ಲಿ ನಮ್ಮ ಪುತ್ರಿ ವಿವಾಹದ ಸವಿನೆನಪಿಗಾಗಿ ಸುಮಾರು ₹ ೧೫೦೦ ಮೌಲ್ಯದ ಮೂರ್ತಿ ನೀಡುತ್ತಿದ್ದೇನೆ. ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ನಿಷ್ಠ ಹಿರಿಯರಾದ ಸೋಮನಾಥ ಹೇಳಿದ್ದಾರೆ.------
ಹಿಂದುಗಳ ಶತಮಾನಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಸಂಕೇತವಾಗಿ ಮಗಳ ಮದುವೆ ಆಮಂತ್ರಣದೊಂದಿಗೆ ಮೂರ್ತಿ ವಿತರಿಸಿ ವಿವಾಹ ಸಂಭ್ರಮ ಸ್ಮರಣೀಯವಾಗಿಸಬೇಕೆಂಬುದು ನನ್ನ ಬಯಕೆ.-ಸೋಮನಾಥ ಗೊಂಬಿ, ಬನಹಟ್ಟಿಯ ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಮತ್ತು ಅಧ್ಯಕ್ಷರು, ಬಾಗಲಕೋಟೆ ಜಿಲ್ಲಾ ಹಟಗಾರ ಸಮಾಜ.