ಸಾರಾಂಶ
ಸರಿಯಾದ ನಿರ್ವಹಣೆ ಮಾಡದಿದ್ದರೆ ಶೇ.60-70ರಷ್ಟು ಇಳುವರಿ ನಷ್ಟ: ಡಾ.ಹರೀಶ್ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಂಠಿ ಬೆಳೆಯಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಶೇ.60-70ರಷ್ಟು ಇಳುವರಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಹರೀಶ್ ಬಿ.ಎಸ್. ತಿಳಿಸಿದರು.ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು ಕೃಷಿ ತಂತ್ರಜ್ಞರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮಹಾವಿದ್ಯಾಲಯದ ಆವರಣದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳ ರೈತರಿಗೆ ‘ಶುಂಠಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳು’ ಕುರಿತು ಆಯೋಜಿಸಿದ್ದ ರೈತರ ತರಬೇತಿ, ಸಂವಾದ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.ರೋಗ ಹತೋಟಿ ಸಾಧ್ಯ:ಶುಂಠಿ ಬೆಳೆಯಲ್ಲಿ ಈಗಾಗಲೆ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ಸರಿಯಾದ ನಿರ್ವಹಣೆ ಕ್ರಮ ಅನುಸರಿಸಿದರೆ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ವಿಷಯ ತಜ್ಞರ ಸಲಹೆ ಪಡೆದು ರೋಗ ಬಂದಿರುವ ಮಳೆ ಹೆಚ್ಚಿರುವ ಪ್ರದೇಶದಲ್ಲಿ 6ರಿಂದ 7 ದಿನಗಳಿಗೊಮ್ಮೆ ಹಾಗೂ ಮಳೆ ಕಡಿಮೆ ಇರುವ ಪ್ರದೇಶದಲ್ಲಿ 12ರಿಂದ 15 ದಿನಕ್ಕೊಮ್ಮೆ ಔಷಧ ಸಿಂಪಡಣೆ ಮಾಡಿದರೆ ರೋಗವನ್ನು ಹತೋಟಿಗೆ ತರಲು ಸಾಧ್ಯ. ರೈತರು ಆತಂಕದಿಂದ ಖಾಸಗಿ ಔಷಧ ಅಂಗಡಿಗಳ ಮೊರೆಹೋಗಿ ಒಮ್ಮೆಗೆ ಅವರು ನೀಡುವ ಐದರಿಂದ ಆರು ತರಹದ ಶಿಲೀಂಧ್ರನಾಶಕ, ಕೀಟನಾಶಕ, ಹಾರ್ಮೋನ್, ಕಡಲಪಾಚಿ ಮುಂತಾದವುಗಳನ್ನು ಸಿಂಪಡಣೆ ಮಾಡುವುದರಿಂದ ರೋಗ ಹತೋಟಿಗೆ ಬರುವುದಿಲ್ಲ. ಬದಲಿಗೆ ರೋಗದ ಹಂತದಲ್ಲಿ ನೀಡಬೇಕಾದ ನಿರ್ದಿಷ್ಟ ಔಷಧವನ್ನು ವಿಷಯ ತಜ್ಞರ ಸಲಹೆ ಮೇರೆಗೆ ನೀಡುವಂತೆ ಎಂದು ಡಾ.ಹರೀಶ್ ಬಿ.ಎಸ್. ತಿಳಿಸಿದರು.ರೈತರು ಬೆಂಕಿ ರೋಗಕ್ಕೆ ಹೆದರಿ ಪೋಷಕಾಂಶಗಳನ್ನು ಮತ್ತು ಔಷಧಗಳನ್ನು ಕಾಲಕಾಲಕ್ಕೆ ಅಗತ್ಯ ಪ್ರಮಾಣದಲ್ಲಿ ನೀಡದಿದ್ದರೆ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ತಜ್ಞರ ಶಿಫಾರಸ್ಸಿನ ಮೇರೆಗೆ ಪೋಷಕಾಂಶಗಳು ಮತ್ತು ಔಷಧಗಳನ್ನು ಬೆಳೆಗೆ ಒದಗಿಸಿದರೆ ರೋಗವನ್ನು ನಿಯಂತ್ರಿಸಬಹುದು. ಇಂತಹ ಗಡ್ಡೆಗಳನ್ನು ಬಿತ್ತನೆಗೂ ಸಹ ಬಳಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಜನಾರ್ದನ್ ಜಿ., ರೈತರು ಬೆಳೆಗಳಲ್ಲಿ ಹೆಚ್ಚು ಆದಾಯಗಳಿಸುವ ಜೊತೆಗೆ ಭೂಮಿಯ ಫಲವತ್ತತೆ ಕಾಪಾಡುವಲ್ಲಿ ಗಮನಹರಿಸಬೇಕು ಎಂದು ತಿಳಿಸಿದರು.ಪ್ರಸಕ್ತ ವರ್ಷದಲ್ಲಿ ಶುಂಠಿ ಬೆಳೆಯಲ್ಲಿ ವಾತಾವರಣದ ವೈಪ್ಯರಿತ್ಯದಿಂದಾಗಿ ರೋಗ ಬಾಧೆಯು ಉಲ್ಬಣವಾಗಿರುವುದನ್ನು ಗಮನಿಸಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯು ತಜ್ಞರ ತಂಡವನ್ನು ರಚಿಸಿ ಕ್ಷೇತ್ರ ವಿಶ್ಲೇಷಣೆಯನ್ನು ಕೈಗೊಂಡಿರುತ್ತಾರೆ. ವಿಶ್ಲೇಷಣೆಯಲ್ಲಿ ವಿಜ್ಞಾನಿಗಳ ತಂಡವು ಗಮನಿಸಿದ ಅಂಶಗಳು ಹಾಗೂ ಸೂಕ್ತ ಪರಿಹಾರಗಳನ್ನು ತಿಳಿಸುವ ಉದ್ದೇಶದಿಂದ ಇಂದಿನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ಉಪಯೋಗವನ್ನು ರೈತರು ಪಡೆದುಕೊಳ್ಳುವಂತೆ ತಿಳಿಸಿದರು.ಮೈಸೂರು ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸಬೀನ ಅಯ್ಯಣ್ಣ ಮಾತನಾಡಿ, ಪ್ರಸಕ್ತ 2025-26ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ದೊರೆಯುವ ಸವಲತ್ತುಗಳು ಹಾಗೂ ಸಹಾಯಧನದ ಮಾಹಿತಿಯನ್ನು ನೀಡಿದರು.ವಿವಿಧ ಗೋಷ್ಠಿ:ತಾಂತ್ರಿಕ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಡಾ.ಹರೀಶ್ ಬಿ.ಎಸ್. ಅವರು ಶುಂಠಿಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಮಹತ್ವ, ಡಾ.ಕಿರಣ್ ಕುಮಾರ್ ಕೆ.ಸಿ. ಅವರು ಶುಂಠಿ ಕೃಷಿಯಲ್ಲಿ ಸಮಗ್ರ ರೋಗ ನಿರ್ವಹಣೆ, ಡಾ. ರಾಮೇಗೌಡ ಜಿ.ಕೆ. ಅವರು ಶುಂಠಿ ಕೃಷಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಹಾಗೂ ಡಾ. ಮಂಜುನಾಥ್ ಜಿ. ಅವರು ಜೈವಿಕ ಗೊಬ್ಬರಗಳ ಮಹತ್ವದ ಕುರಿತು ಮಾಹಿತಿ ನೀಡಿದರು.ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥ ಡಾ.ತನ್ವೀರ್ ಅಹ್ಮದ್, ವಿಷಯ ತಜ್ಞರಾದ ಡಾ.ಅರವಿಂದ ಕುಮಾರ್ ಜೆ.ಎಸ್., ಡಾ.ಶಿವಕುಮಾರ್ ಕೆ.ಎಂ., ಡಾ.ಮನುಕುಮಾರ್ ಎಚ್.ಆರ್., ಡಾ. ಚಂದನ್, ಡಾ. ಮಮತಾಲಕ್ಷ್ಮೀ ಎನ್., ಡಾ. ಸಿದ್ದಪ್ಪ ಆರ್., ಮತ್ತು ಡಾ. ಮುತ್ತುರಾಜು ಜಿ.ಪಿ. ಅವರು ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶುಂಠಿ ಕೃಷಿಯ ಸಂಪೂರ್ಣ ಮಾಹಿತಿಯನ್ನು ಪರಸ್ಪರ ಚರ್ಚಿಸಿದರು.
ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಶುಂಠಿ ಕೃಷಿಯ ವೈಜ್ಞಾನಿಕ ತಂತ್ರಜ್ಞಾನಗಳ ವಸ್ತುಪ್ರದರ್ಶನ’ವನ್ನು ರೈತರು ವೀಕ್ಷಿಸಿ ವಿಷಯವನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಂಡರು.