ಸಾರಾಂಶ
ಬೆಳೆಗೆ ಸಮರ್ಪಕ ಬೆಲೆ ಸಿಗದ ಕಾರಣ ಶುಂಠಿ ಬೆಳೆದ ಕೃಷಿಕರು ಕಂಗಾಲಾಗಿದ್ದು ಆರ್ಥಿಕವಾಗಿ ಸಾಕಷ್ಟು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಶುಂಠಿ ಬೆಳೆಗಾರರ ಹಿತ ಕಾಪಾಡಬೇಕೆಂದು ಕೊಡಗು ಜಿಲ್ಲಾ ಶುಂಠಿ ಕೃಷಿಕರು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಳೆಗೆ ಸಮರ್ಪಕ ಬೆಲೆ ಸಿಗದ ಕಾರಣ ಶುಂಠಿ ಬೆಳೆದ ಕೃಷಿಕರು ಕಂಗಾಲಾಗಿದ್ದು ಆರ್ಥಿಕವಾಗಿ ಸಾಕಷ್ಟು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಶುಂಠಿ ಬೆಳೆಗಾರರ ಹಿತ ಕಾಪಾಡಬೇಕೆಂದು ಕೊಡಗು ಜಿಲ್ಲಾ ಶುಂಠಿ ಕೃಷಿಕರು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.ಮಂಗಳವಾರ ಸಹಾಯಕ ಜಿಲ್ಲಾಧಿಕಾರಿಗೆ ಬೇಡಿಕೆ ಪತ್ರ ನೀಡಿರುವ ಬೆಳೆಗಾರರು, ಶುಂಠಿ ಬೆಳೆಯಲು ತಗಲುವ ಉತ್ಪಾದಕ ವೆಚ್ಚ ಅಧಿಕವಾಗಿದೆ. ಬೆಲೆ ಹಾಗೂ ಬೆಳೆಯ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಬೆಳೆಗಾರರಿಗೆ ಕ್ವಿಂಟಾಲ್ ಗೆ ಕನಿಷ್ಠ 7000 ರು. ಬೆಂಬಲ ಬೆಲೆ ನೀಡುವ ಮೂಲಕ ಕೃಷಿಕರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಶುಂಠಿಯ ಬೆಲೆ 60 ಕೆ.ಜಿ. ತೂಕದ ಚೀಲವೊಂದಕ್ಕೆ 1000 ರು.ಗಳಿಂದ 1100 ರು.ಗಷ್ಟಿದೆ. ವರ್ಷವಿಡೀ ಲಕ್ಷಾಂತರ ರು. ಹಣ ಖರ್ಚು ಮಾಡಿ ಬೆಳೆ ಬೆಳೆವ ರೈತರಿಗೆ ಏನೇನು ಸಾಲದಾಗಿದೆ. ಬೆಳೆಗೆ ಖರ್ಚು ಮಾಡಿದ ಹಣವೂ ಕೂಡ ಸಿಗಲಾರದೇ ಆತ್ಮಹತ್ಯೆಯತ್ತ ಚಿಂತೆ ಮಾಡುವಷ್ಟು ಸಂಕಷ್ಟದಲ್ಲಿ ಶುಂಠಿ ಬೆಳೆದ ರೈತರಿದ್ದಾರೆ ಎಂದು ಗಮನ ಸೆಳೆಯಲಾಗಿದೆ.ಆದ್ದರಿಂದ ರಾಜ್ಯ ಸರ್ಕಾರವೇ ರಾಜ್ಯದಾದ್ಯಂತ ಶುಂಠಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಥವಾ ಈಗ ಇರುವ ಖಾಸಗಿ ಶುಂಠಿ ಖರೀದಿ ಘಟಕಗಳ ಬೆಂಬಲ ನೀಡಿ ರೈತರಿಂದ ನೇರವಾಗಿ ಖರೀದಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆ ಸಂದರ್ಭ ಕೊಡಗು ಶುಂಠಿ ಕೃಷಿಕರ ಪರವಾಗಿ ಹೆರೂರು ಅರುಣ್ ಚೆಂಗಪ್ಪ, ಏಳನೇ ಹೊಸಕೋಟೆ ಅಶೋಕ್, ವಿರಾಜಪೇಟೆ ಲವ, ನಾಕೂರು ಶಿರಂಗಾಲದ ಚೇತನ್ ಪೊನ್ನಪ್ಪ, ಕಲ್ಲೂರು ಪ್ರಶಾಂತ್, ದೊಡ್ಡತ್ತೂರು ನಾರಾಯಣ, ಮಳೂರು ಪ್ರವೀಣಕುಮಾರ್, ಹೆರೂರು ಧನಪಾಲ್, ಮಾದಾಪಟ್ಟಣ ಮಹದೇವ, ಗುರುಮಲ್ಲೇಶ ಇದ್ದರು.