ವಾಜಪೇಯಿ ಜೂಲಾಜಿಕಲ್ ಪಾರ್ಕ್‌ಗೆ ಬರಲಿದೆ ಜಿರಾಫೆ

| Published : Oct 14 2023, 01:01 AM IST

ಸಾರಾಂಶ

ಈ ಪಾರ್ಕ್‌ಗೆ ಈಗ ಮತ್ತೊಂದು ಜಿರಾಫೆ ಬರಲಿದೆ. ಇದರಿಂದ ಪ್ರವಾಸಿಗರನ್ನು ಸೆಳೆಯುವ ಕಾರ್ಯವನ್ನು ಮಾಡಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವ ಪರಂಪರೆ ತಾಣ ಹಂಪಿ ಬಳಿಯ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ದಸರಾ ಬಳಿಕ ಮತ್ತೊಂದು ಅತಿಥಿ ಆಗಮಿಸಲಿದೆ. ಇದಕ್ಕಾಗಿ ತಯಾರಿಯೂ ನಡೆದಿದೆ. ಈ ಪಾರ್ಕ್‌ಗೆ ಈಗ ಮತ್ತೊಂದು ಜಿರಾಫೆ ಬರಲಿದೆ. ಇದರಿಂದ ಪ್ರವಾಸಿಗರನ್ನು ಸೆಳೆಯುವ ಕಾರ್ಯವನ್ನು ಮಾಡಲಾಗುತ್ತಿದೆ.

2023ರ ಜನವರಿ ತಿಂಗಳಲ್ಲಿ ಹಂಪಿ ಉತ್ಸವದ ಸಂದರ್ಭದಲ್ಲಿ ಈ ಪಾರ್ಕ್‌ಗೆ ಆಫ್ರಿಕಾ ಮೂಲದ ಜಿರಾಫೆಯನ್ನು ಬಿಹಾರದಿಂದ ತರಲಾಗಿತ್ತು. ಒಂದೂವರೆ ವರ್ಷದ ಜಿರಾಫೆಯನ್ನು ಪಾಟ್ನಾದ ಮೃಗಾಲಯದಿಂದ ತರಲಾಗಿತ್ತು. ಈಗಾಗಲೇ ಪ್ರಾಣಿ, ಪಕ್ಷಿಗಳ ಬೀಡಾಗಿರುವ ಈ ಉದ್ಯಾನಕ್ಕೆ ಮತ್ತೊಂದು ಜಿರಾಫೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ತಯಾರಿ ನಡೆಸಲಾಗಿದೆ.

ಮೈಸೂರಿನಿಂದ ಬರಲಿದೆ ಜಿರಾಫೆ:

ಹಂಪಿಯ ಈ ಜೈವಿಕ ಉದ್ಯಾನದಲ್ಲಿ ಈಗಾಗಲೇ ಬಿಹಾರದ ಪಾಟ್ನಾದಿಂದ ತಂದಿರುವ ಜಿರಾಫೆ ಇದೆ. ಈ ಜಿರಾಫೆಗೆ ಈಗ ಮೈಸೂರಿನ ಜಿರಾಫೆ ಜೋಡಿಯಾಗಲಿದೆ. 4 ವರ್ಷದ ಗಂಡು ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ತರಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೈಸೂರು ದಸರಾ ಬಳಿಕ ಈ ಜಿರಾಫೆ, ಹಂಪಿಯ ಜೂಲಾಜಿಕಲ್‌ ಪಾರ್ಕ್‌ಗೆ ಆಗಮಿಸಲಿದೆ. ಬಿಹಾರ ಜಿರಾಫೆಗೆ ಮೈಸೂರಿನ ಜಿರಾಫೆ ಜೋಡಿಯಾಗಲಿದೆ.

ಪ್ರವಾಸಿಗರ ದಂಡು:

ಉತ್ತರ ಕರ್ನಾಟಕದ ಪ್ರಮುಖ ಜೈವಿಕ ಉದ್ಯಾನವಾಗಿರುವ ಕಮಲಾಪುರದ ಜೂಲಾಜಿಕಲ್‌ ಪಾರ್ಕ್‌ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಪಾರ್ಕ್‌ನ ವೀಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಪಾರ್ಕ್‌ನಲ್ಲಿ ಈಗಾಗಲೇ ಹುಲಿ ಮತ್ತು ಸಿಂಹ ಸಫಾರಿಯೂ ಇದೆ. ಜತೆಗೆ ಚಿರತೆಗಳು ಕೂಡ ಪಾರ್ಕ್‌ನಲ್ಲಿವೆ. ಹಂಪಿಗೆ ಆಗಮಿಸುವ ಪ್ರವಾಸಿಗರು ಈ ಉದ್ಯಾನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. ಈ ಪಾರ್ಕ್‌ನ ಪಕ್ಕದಲ್ಲೇ ದರೋಜಿ ಕರಡಿಧಾಮ ಇದೆ. ಹಾಗಾಗಿ ಈ ಪಾರ್ಕ್‌ ಪ್ರವಾಸಿಗರ ನೆಚ್ಚಿನ ತಾಣವಾಗಿಯೂ ಮಾರ್ಪಾಡಾಗುತ್ತಿದೆ.

ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ ಹೊಂದಿರುವ ಈ ಪ್ರದೇಶದಲ್ಲಿ ಈ ಪಾರ್ಕ್‌ ಕೂಡ ಈಗ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಹಾಗಾಗಿ ಈ ಭಾಗ ಪ್ರಮುಖ ಪ್ರವಾಸಿ ಹಬ್‌ ಆಗಿ ಮಾರ್ಪಾಡಾಗಿದೆ. ಈಗಾಗಲೇ ಪ್ರವಾಸಿಗರು ಕೂಡ ಈ ಪಾರ್ಕ್‌ ವೀಕ್ಷಣೆ ಮಾಡಿ, ಖುಷಿಗೊಳ್ಳುತ್ತಿದ್ದಾರೆ. ಅಕ್ಟೋಬರ್‌ ತಿಂಗಳಿನಲ್ಲಿ ಶಾಲೆಗಳ ರಜೆ ಹಿನ್ನೆಲೆಯಲ್ಲಿ ಇನ್ನಷ್ಟು ಪ್ರವಾಸಿಗರು ಕೂಡ ಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.

ಪಾರ್ಕ್‌ನಲ್ಲಿವೆ ಹುಲಿ, ಸಿಂಹ:

ಅಟಲ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಹೊಸದಾಗಿ ಕರಡಿಗಳು, ನೀರಾನೆ, ಜಿರಾಫೆ ಸೇರಿ ಹಲವಾರು ಪ್ರಾಣಿಗಳನ್ನು ತರಲಾಗಿದೆ. ಈಗ ಮತ್ತೊಂದು ಜಿರಾಫೆಯೂ ಬರುತ್ತಿದೆ. ೨೦೧೭ರಲ್ಲಿ ಪ್ರಾರಂಭವಾಗಿರುವ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್‌ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ. ಈಗಾಗಲೇ ಉದ್ಯಾನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಸೇರಿದಂತೆ ೮೦ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಹಲವಾರು ಪ್ರಾಣಿಗಳಿವೆ.

ವೀಕ್ಷಕರ ಸಂಖ್ಯೆ ಹೆಚ್ಚಳ:

ಕಮಲಾಪುರದ ಜೈವಿಕ ಉದ್ಯಾನಕ್ಕೆ ಮೈಸೂರಿನಿಂದ ಗಂಡು ಜಿರಾಫೆ ತರಲಾಗುತ್ತಿದೆ. ಈಗಾಗಲೇ ಬಿಹಾರದಿಂದ ಜಿರಾಫೆ ತರಲಾಗಿದೆ. ಉದ್ಯಾನಕ್ಕೆ ವೀಕ್ಷಕರ ಸಂಖ್ಯೆಯೂ ಹೆಚ್ಚಳವಾಗಿದೆ. ಉದ್ಯಾನಕ್ಕೆ ಮೈಸೂರು ದಸರಾ ಬಳಿಕ ಜಿರಾಫೆ ಬರಲಿದೆ. ಈಗ ಎಲ್ಲ ಪ್ರಕ್ರಿಯೆ ನಡೆಸಲಾಗಿದೆ ಎಂದು ಜೂಲಾಜಿಕಲ್‌ ಪಾರ್ಕ್‌ನ ಎಸಿಎಫ್‌ ರವಿಕುಮಾರ ತಿಳಿಸಿದರು.