ರೈಲಿನಲ್ಲಿ ಚಾಕು ಚುಚ್ಚಲೆತ್ನಿಸಿ ಅರೆಸ್ಟ್‌ ಆದ ಅಂಜಲಿ ಹಂತಕ

| Published : May 18 2024, 01:31 AM IST / Updated: May 18 2024, 07:52 AM IST

Hubballi Anjali murder Case
ರೈಲಿನಲ್ಲಿ ಚಾಕು ಚುಚ್ಚಲೆತ್ನಿಸಿ ಅರೆಸ್ಟ್‌ ಆದ ಅಂಜಲಿ ಹಂತಕ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ್‌ ಗೋವಾ ಅಥವಾ ಮಹಾರಾಷ್ಟ್ರಕ್ಕೆ ಹೋಗಿ ತಲೆಮರೆಸಿಕೊಳ್ಳಲು ಯತ್ನಿಸಿದ್ದನಾದರೂ ತಾನು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಜೊತೆ ಜಗಳವಾಡಿ, ಆಕೆಗೆ ಚಾಕು ಚುಚ್ಚಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ

 ದಾವಣಗೆರೆ/ಹುಬ್ಬಳ್ಳಿ :  ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ್‌ ಗೋವಾ ಅಥವಾ ಮಹಾರಾಷ್ಟ್ರಕ್ಕೆ ಹೋಗಿ ತಲೆಮರೆಸಿಕೊಳ್ಳಲು ಯತ್ನಿಸಿದ್ದನಾದರೂ ತಾನು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಜೊತೆ ಜಗಳವಾಡಿ, ಆಕೆಗೆ ಚಾಕು ಚುಚ್ಚಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಅಂಜಲಿ ಮನೆಗೆ ನುಗ್ಗಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ನಂತರ ಬಸ್‌ ಮೂಲಕ ಹಾವೇರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ಮೈಸೂರಿಗೆ ಹೋಗಿದ್ದ. ಆದರೆ ತಾನು ಕೊಲೆ ಮಾಡಿರುವುದೆಲ್ಲ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಅಥವಾ ಗೋವಾಕ್ಕೆ ತೆರಳಿ ತಲೆ ಮರೆಸಿಕೊಳ್ಳಬೇಕೆಂದು ಸಂಚು ನಡೆಸಿದ್ದ. 

ಅದಕ್ಕಾಗಿ ಅಲ್ಲಿಂದ ವಿಶ್ವಮಾನವ ರೈಲ್‌ ಹತ್ತಿ ಬೆಳಗಾವಿಗೆ ಹೊರಟಿದ್ದ. ಆದರೆ ಅಲ್ಲಿ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಕಿರಿಕ್‌ ಮಾಡಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.ರೈಲಲ್ಲಿ ಆಗಿದ್ದೇನು?: ಮೈಸೂರಿಂದ ಬೆಂಗಳೂರು ಮಾರ್ಗವಾಗಿ ದಾವಣಗೆರೆಗೆ ಹೋಗುತ್ತಿದ್ದಾಗ ಗುರುವಾರ ರಾತ್ರಿ ತಾಲೂಕಿನ ಮಾಯಕೊಂಡ ಸಮೀಪ ಗಿರೀಶ್‌ ರೈಲಿನ ಶೌಚಾಲಯಕ್ಕೆ ಹೋಗಿದ್ದ ಗದಗ ಮೂಲದ ಸಹ ಪ್ರಯಾಣಿಕ ಮಹಿಳೆಯನ್ನು ಹಿಂಬಾಲಿಸಿದ್ದಾನೆ. 

ದುರುದ್ದೇಶದಿಂದ ತನ್ನ ಹಿಂಬಾಲಿಸಿದ್ದರಿಂದ ಆಕ್ರೋಶಗೊಂಡ ಮಹಿಳೆ "ನಿನಗೆ ಅಕ್ಕ, ತಂಗಿ ಇಲ್ಲವೇ?.. " ಎಂದು ದಬಾಯಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಆಕೆ ಮೇಲೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ಅದೃಷ್ಟವಶಾತ್‌ ಚಾಕು ಮಹಿಳೆಯ ಕೈಗೆ ತಾಕಿ, ಹೆಚ್ಚಿನ ಅನಾಹುತ ತಪ್ಪಿದೆ.

ಇದರಿಂದ ಗಾಬರಿಗೊಂಡ ಮಹಿಳೆ ನೆರವಿಗಾಗಿ ಪತಿ ಹಾಗೂ ಎಲ್ಲರಿಗೂ ಕೇಳಿಸುವಂತೆ ಕೂಗಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ರೈಲಿನಲ್ಲೇ ಈತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ರಿಕ್ತ ಜನರಿಂದ ತಪ್ಪಿಸಿಕೊಳ್ಳಲು ಹಂತಕ ರೈಲಿನಿಂದ ಹೊರಕ್ಕೆ ಜಿಗಿದಿದ್ದು, ಈ ವೇಳೆ ಆತನ ಮುಖ, ತಲೆ, ಕೈ-ಕಾಲುಗಳಿಗೆ ಗಾಯಗಳಾಗಿವೆ.

ವಿಷಯ ತಿಳಿದು ತಕ್ಷಣವೇ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್‌ ಸಂತೋಷ ಎಂ.ಪಾಟೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆತನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ರೈಲ್ವೆ ಪೊಲೀಸ್‌ ಸಿಬ್ಬಂದಿಯೊಬ್ಬರು, ಮೊಬೈಲ್‌ನಲ್ಲಿ ಫೋಟೋ ಬಂದಿದ್ದು ನೋಡಿ ಈತನೇ ಅಂಜಲಿ ಕೊಲೆ ಆರೋಪಿ ಇರಬೇಕು ಎಂಬ ಅನುಮಾನದಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

 ಹಿರಿಯ ಅಧಿಕಾರಿ ಬಂದು ಪರಿಶೀಲನೆ ನಡೆಸಿ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ವಿಷಯ ರವಾನಿಸಿದ್ದರು. ಆಮೇಲೆ ಈತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆದೊಯ್ದು ಕಿಮ್ಸ್‌ಗೆ ದಾಖಲಿಸಿದ್ದಾರೆ.