ಸಾರಾಂಶ
ಗದಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಫೈನಾನ್ಸ್ ಗಳು ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಸಾಲ ನೀಡಿ ಶೋಷಿಸುತ್ತಿವೆ. ಸರ್ಕಾರ ಇತ್ತೀಚಿಗೆ ಹೊರಡಿಸಿರುವ ಸುಗ್ರೀವಾಜ್ಞೆಯ ಆಧಾರದಲ್ಲಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಅವರು ಶುಕ್ರವಾರ ಇಲ್ಲಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದು, ಇದೇ ವೇಳೆ ಭವನದ ಹೊರಗೆ ಸೇರಿದ್ದ ನೂರಾರು ಮಹಿಳೆಯರು ಸಂಘದ ವಿರುದ್ಧ ಆರೋಪ ಮಾಡುವುದು ತಪ್ಪು ಎಂದು ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಸುಮಾರು 2 ಗಂಟೆಗಳ ಕಾಲ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು. ಧರ್ಮಸ್ಥಳ ಸಂಸ್ಥೆಯಿಂದ ನಮಗೆ ಅನುಕೂಲವಾಗಿದೆ. ಈಗ ಮಾತನಾಡುವ ಯಾರೊಬ್ಬರೂ ನಮ್ಮ ನೆರವಿಗೆ ಬರುತ್ತಿಲ್ಲ. ಧರ್ಮಸ್ಥಳ ಸಂಸ್ಥೆಯಿಂದ ನಾವು ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಇದು ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಅಪಪ್ರಚಾರ ಮಾಡುವ ಹುನ್ನಾರ, ಮಟ್ಟಣ್ಣವರ ಜೊತೆ ನಮಗೆ ಮಾತನಾಡಲು ಅವಕಾಶ ನೀಡಿ ನಾವು ಅವರಿಗೆ ಉತ್ತರ ನೀಡುತ್ತೇವೆ ಎಂದು ಬಾಗಿಲಲ್ಲಿಯೇ ನಿಂತರು. ಪೊಲೀಸರು ಹರಸಾಹಸ ಪಟ್ಟು ಮಟ್ಟಣ್ಣವರ ಮತ್ತಿತರರನ್ನು ಹೊರಗೆ ಕಳುಹಿಸಿದರು.ಇದಕ್ಕೂ ಮುನ್ನ ಸುಗ್ರೀವಾಜ್ಞೆ ಕುರಿತು ಮಾತನಾಡುತ್ತ ಮಟ್ಟಣ್ಣವರ, ಸಾಲ ನೀಡುವ ಮೂಲಕ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಫೈನಾನ್ಸ್ ಗಳು ಅನ್ಯಾಯವೆಸಗುತ್ತಿವೆ. ಹೀಗಾಗಿ ಸರ್ಕಾರದ ಸುಗ್ರೀವಾಜ್ಞೆ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದಂತೆ ಲೈಸೆನ್ಸ್ ಪಡೆಯದೇ ಸಾಲ ನೀಡಿರುವ ಅನಧಿಕೃತ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಂಡಿರುವವರು ಇನ್ನು ಮುಂದೆ ಅಸಲು ಸೇರಿದಂತೆ ಬಡ್ಡಿ ಕಟ್ಟುವುದನ್ನು ನಿಲ್ಲಿಸಬೇಕು. ಸರ್ಕಾರ ಅಂತಹ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕಾಯಿದೆಯಲ್ಲಿ ಫೈನಾನ್ಸ್ ಗಳು ಸಾಲಗಾರರಿಗೆ ಯಾವುದೇ ರೀತಿ ಕಿರುಕುಳ ಕೊಡುವಂತಿಲ್ಲ, ವಸೂಲಿ ಮಾಡುವಂತಿಲ್ಲ ಅನ್ನೋದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದಾಗಲೂ ಫೈನಾನ್ಸ ಗಳು ಸಾಲಗಾರರ ಮನೆ ಮುಂದೆ ನಿಂತು ಶೋಷಣೆ ಮುಂದುವರಿಸಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ನಿಯಮ ಪೊಲೀಸ್ ಇಲಾಖೆ ಕಟ್ಟುನಿಟ್ಟು ಜಾರಿಗೊಳಿಸಿ ಅಮಾಯಕ ಜನರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾ ಭವನದ ಮುಂದೆ ಗೊಂದಲ
ಸುದ್ದಿಗೋಷ್ಠಿ ಮುಗಿಸಿ ಪತ್ರಿಕಾ ಭವನದಿಂದ ಗಿರೀಶ ಮಟ್ಟಣ್ಣವರ ಹೊರಗೆ ಬರಬೇಕು ಎನ್ನುವಷ್ಟರಲ್ಲಿಯೇ ನೂರಾರು ಸಂಖ್ಯೆಯಲ್ಲಿ ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳು ಸೇರಿದ್ದರು. ನಮ್ಮ ಸಂಘದಿಂದ ಯಾರಿಗೂ ಹಾನಿಯಾಗಿಲ್ಲ, ನೋವಾಗಿಲ್ಲ, ಗಿರೀಶ ಅವರಿಗೆ ನಾವೇ ಉತ್ತರ ನೀಡುತ್ತೇವೆ ಎಂದು ಪಟ್ಟು ಹಿಡಿದರು.ವಿಷಯದ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗದಗ ಶಹರ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಇದಕ್ಕೆ ಪಟ್ಟು ಬಿಡದ ಮಹಿಳೆಯರು ಉರಿಬಿಸಿಲಿನಲ್ಲಿ ಪತ್ರಿಕಾ ಭವನದ ಎದುರಿನ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಗಿರೀಶ ಮಟ್ಟೆಣ್ಣವರ ಹಾಗೂ ಮುಖಂಡರಿಗೆ ಪೊಲೀಸರು ರಕ್ಷಣೆ ಕೊಡಬೇಕಾಯಿತು. ಶಹರ ಠಾಣೆ ಸಿಪಿಐ ಡಿ.ಬಿ.ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ನಿಂತು ಮಹಿಳೆಯರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಇದೇ ವೇಳೆ ಮಹಿಳೆಯರು ಗಿರೀಶ ಮಟ್ಟಣ್ಣನವರ ಜತೆಗೆ ಆಗಮಿಸಿದ್ದ ರೈತ ಮುಖಂಡರನ್ನೂ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು. ನಂತರ ಸ್ಥಳದಲ್ಲಿದ್ದ ಮಹಿಳೆಯರನ್ನು ಸರಿಸಿ ಪೊಲೀಸರ ರಕ್ಷಣೆಯಲ್ಲಿ ಗಿರೀಶ ಮಟ್ಟಣ್ಣವರ ಹಾಗೂ ಸಂಗಡಿಗರನ್ನು ಹೊರಗಡೆ ಕರೆದುಕೊಂಡು ಹೋಗುವಂತಾಯಿತು.